ಸೋಂಕಿನ ವಿರುದ್ಧ ಹೋರಾಡಲು ಯೋಗ ಸಹಕಾರಿಯೇ? ಇಲ್ಲಿದೆ ಉತ್ತರ

Yoga
Published on

# ವೈರಲ್ ಸೋಂಕು ಮುಂಜಾಗ್ರತೆಗೆ ಯೋಗ ಸಹಕಾರಿಯೇ?

| ಸದಾಶಿವ 45 ವರ್ಷ, ತಿಪಟೂರು.

ವೈರಲ್ ಸೋಂಕು ಸಾಮಾನ್ಯವಾಗಿ ಒಂದು ವಾರದಲ್ಲಿ ತನ್ನ ಕೋರ್ಸ್ ನಡೆಸುತ್ತದೆ. ರೋಗನಿರೋಧಕ ವ್ಯವಸ್ಥೆಯ ಕಾರ್ಯಚಟುವಟಿಕೆಯನ್ನು ಸುಧಾರಿಸಲು ಯೋಗ ಸಹಾಯ ಮಾಡುತ್ತದೆ. ಒತ್ತಡದ ಹಾಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ ಹಲವಾರು ಯೋಗಾಭ್ಯಾಸಗಳು ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಅನಾರೋಗ್ಯದ ಅವಧಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಲ್ಲಿ ಸೋಂಕು ಹೆಚ್ಚಾದಂತೆ ಆತಂಕವು ಹೆಚ್ಚಾಗುತ್ತದೆ. ಒತ್ತಡವು ನಮ್ಮ ಆರೋಗ್ಯದ ಮೇಲೂ ಹಾನಿಯನ್ನುಂಟುಮಾಡುತ್ತದೆ. ಯೋಗಾಭ್ಯಾಸವು ಅನಾರೋಗ್ಯದಿಂದ ಹೋರಾಡಲು ಮತ್ತು ಅತಿ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಜ್ವರವಿದ್ದಾಗ ಯೋಗ ಮಾಡಬಾರದು. ಎಲ್ಲ ಚಲನೆಗಳೂ (ಯೋಗಾಸನಗಳಿಂದ) ದುಗ್ಧರಸ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶಿರಸ್ಸಿಗೆ ರಕ್ತ ಸಂಚಲನೆಗೊಳ್ಳುವ ಆಸನಗಳಾದ ಶೀರ್ಷಾಸನ, ಸರ್ವಾಂಗಾಸನ, ಶಶಾಂಕಾಸನ, ಮಂಡೂಕಾಸನ, ಊರ್ಧ್ವಪ್ರಸಾರಿತ ಪಾದಾಸನ, ಹಲಾಸನ, ಪಾದಹಸ್ತಾಸನ, ಸೇತುಬಂಧ, ಅಧೋಮುಖ ಶ್ವಾನಾಸನ, ಶವಾಸನ ಇತ್ಯಾದಿಗಳು ದುಗ್ಧರಸ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ.

ನಮ್ಮ ಸುತ್ತಲಿರುವ ಯಾರಾದರೂ ವೈರಸ್ ಸೋಂಕಿಗೆ ಒಳಗಾಗಿದ್ದರೆ ಜೊತೆಯಲ್ಲಿದ್ದವರು ಸೋಂಕಿಗೆ ಒಳಗಾಗುತ್ತಾರೆ. ವೈರಸ್ ಮೂಗು ಮತ್ತು ಗಂಟಲಿನ ಒಳಪದರಕ್ಕೆ ಅಂಟಿಕೊಳ್ಳುತ್ತದೆ. ರೋಗನಿರೋಧಕ ವ್ಯವಸ್ಥೆಯು ಬಿಳಿ ರಕ್ತಕಣಗಳಿಗೆ ವೈರಸ್​ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಯೋಗಾಸನಗಳ (ವಿಲೋಮಗಳು) ಸಹಾಯದಿಂದ ಬಿಳಿ ರಕ್ತಕಣಗಳನ್ನು ತಲೆ ಮತ್ತು ಗಂಟಲಿಗೆ ತಾಜಾ ರಕ್ತದ ಜತೆಗೆ ಸೆಳೆಯಬಹುದು. ಇದು ಸೋಂಕಿನ ಸೈನಸ್ ಇತ್ಯಾದಿ ವಿರುದ್ಧ ಹೋರಾಡಿ ನಿಯಂತ್ರಣಕ್ಕೆ ತರಲಾಗುತ್ತದೆ. ಶಿರಸ್ಸಿಗೆ ರಕ್ತಸಂಚಲನೆಯನ್ನು ಉಂಟುಮಾಡುವ ಆಸನಗಳು ದುಗ್ಧರಸ ಮತ್ತು ರಕ್ತದ ಸರಿಯಾದ ಪರಿಚಲನೆಗೆ ಸಹಾಯ ಮಾಡುತ್ತದೆ. ಬಿಳಿ ರಕ್ತಕಣಗಳ ಮುಕ್ತ ಹರಿಯುವಿಕೆ ದೇಹದೆಲ್ಲೆಡೆ ನಡೆಯುತ್ತದೆ. ಸೋಂಕಿನ ಸೈನಸ್​ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

# ಸರ್ವಾಂಗಾಸನದ ಬಗ್ಗೆ ಮಾಹಿತಿ ತಿಳಿಸಿ.

| ರವಿರಾಜ್ 30 ವರ್ಷ, ಬೆಂಗಳೂರು

ಇದೊಂದು ಭುಜದ ಮೇಲೆ ನಿಲ್ಲುವ ಭಂಗಿಯಾಗಿದೆ. ಈ ಆಸನದಲ್ಲಿ ದೇಹದ ಎಲ್ಲ ಅಂಗಾಂಗಗಳಿಗೆ ವ್ಯಾಯಾಮ ದೊರಕುವುದರಿಂದ ಇದಕ್ಕೆ ಸರ್ವಾಂಗಾಸನ ಎಂಬ ಹೆಸರು ಬಂದಿದೆ. ಯೋಗಗುರು ಬಿ.ಕೆ.ಎಸ್. ಅಯ್ಯಂಗಾರ್ ತಮ್ಮ ಪ್ರಸಿದ್ಧ ಪುಸ್ತಕ ‘ಯೋಗದೀಪಿಕಾ’ದಲ್ಲಿ (ಲೈಟ್ ಆನ್ ಯೋಗ) ಸರ್ವಾಂಗಾಸನವನ್ನು ಎಲ್ಲ ಯೋಗಾಸನಗಳ ರಾಣಿ ಎಂದು ಬಣ್ಣಿಸಿದ್ದಾರೆ. ಥೈರಾಯ್್ಡ ಚಿಕಿತ್ಸಕ ಭಂಗಿಯಾಗಿದೆ. ಮಿದುಳಿಗೆ ಹೆಚ್ಚಿನ ರಕ್ತ ಪೂರೈಕೆಯಾಗಿ ಮಿದುಳನ್ನು ಶಾಂತಗೊಳಿಸುತ್ತದೆ. ಒತ್ತಡ ಮತ್ತು ಸೌಮ್ಯ ಖಿನ್ನತೆಯನ್ನೂ ನಿವಾರಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸುಧಾರಣೆಗೊಳ್ಳುತ್ತದೆ. ಕುತ್ತಿಗೆ, ಭುಜ ಬಲಗೊಳ್ಳುತ್ತದೆ. ಆಯಾಸ ನಿಯಂತ್ರಣ, ಶ್ವಾಸಕೋಶ ಬಲಿಷ್ಠ, ಬಂಜೆತನ ಮತ್ತು ಸೈನಸೈಟಿಸ್​ಗೆ ಚಿಕಿತ್ಸಕ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಮೈಗ್ರೇನ್, ಉದರವ್ಯಾಧಿ, ಗಂಟಲುನೋವು, ಮೂಲವ್ಯಾಧಿ, ಮುಟ್ಟುದೋಷಗಳು ನಿಯಂತ್ರಣ. ಜೀರ್ಣಶಕ್ತಿ ವೃದ್ಧಿ. ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ.

ಗಮನಿಸಿ. ಹೃದ್ರೋಗ, ಹೆಚ್ಚಿನ ರಕ್ತದೊತ್ತಡ, ತೀವ್ರ ಸೊಂಟನೋವು, ಕುತ್ತಿಗೆನೋವು ಇದ್ದವರು ಈ ಆಸನ ಮಾಡುವುದು ಬೇಡ. ಗುರುಮುಖೇನ ಕಲಿತು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net