

ನವದೆಹಲಿ: ಹಾವೊಂದು ಇಡೀ ಜಿಂಕೆಯನ್ನು ಗುಳುಂ ಸ್ವಾಹ ಮಾಡಿದ ವಿಡಿಯೋವನ್ನು ಎಂದಾದರೂ ನೀವು ನೋಡಿದ್ದೀರಾ? ನೋಡಿಲ್ಲವಾದರೆ, ಇತ್ತೀಚೆಗಷ್ಟೇ ವೈರಲ್ ಆದ ವಿಡಿಯೋವೊಂದು ನಿಮಗೆ ಆ ಥ್ರಿಲ್ ನೀಡಲಿದೆ.
ಭಾರತೀಯ ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಅವರು ತಮ್ಮ ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದು, ತುಂಬಾ ಹಸಿದಿದ್ದ ಬರ್ಮೀಸ್ ಹೆಬ್ಬಾವು ಇಡೀ ಜಿಂಕೆಯನ್ನೇ ನುಂಗಿದೆ. ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿದ ವಿಡಿಯೋವನ್ನು ಭಾರತದ ವೈಲ್ಡ್ಲೆನ್ಸ್ ಕಳುಹಿಸಿದೆ ಎಂದು ಕಸ್ವಾನ್ ಅವರು ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.
ಎರಡು ನಿಮಿಷದ ವಿಡಿಯೋದಲ್ಲಿ ಹಸಿವಿನಿಂದ ಬಳಲಿರುವ ಹೆಬ್ಬಾವು ಬೇಟೆಯಾಡಿದ್ದ ಜಿಂಕೆಯನ್ನು ತಲೆಯಿಂದ ಪ್ರಾರಂಭಿಸಿ ಇಡೀ ದೇಹವನ್ನು ನಿಧಾನವಾಗಿ ನುಂಗುತ್ತದೆ. ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಹೆಬ್ಬಾವಿನ ದೊಡ್ಡ ಬಾಯಿಯನ್ನು ನೋಡಬಹುದಾಗಿದೆ. ವಿಡಿಯೋ ವೈರಲ್ ಆಗಿದ್ದು, ಈವರೆಗೆ 21 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.
ಮೊಲ, ಇಲಿಯಂತಹ ಸಣ್ಣ ಪ್ರಾಣಿಗಳನ್ನು ಹಾವುಗಳು ಗುಳುಂ ಸ್ವಾಹ ಮಾಡುವುದು ಸಾಮಾನ್ಯ. ಆದರೆ, ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ನುಂಗುವ ವಿಡಿಯೋಗಳು ಕಾಣಸಿಗುವುದು ತುಂಬಾ ಅಪರೂಪ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿಗರಿಗೆ ರೋಚಕತೆ ಕಟ್ಟಿಕೊಡುವುದಂತೂ ಸತ್ಯವಾಗಿದೆ. ನೆಟ್ಟಿಗರು ಸಹ ವಿಡಿಯೋ ನೋಡಿ ಹುಬ್ಬೇರಿಸಿ ತಮ್ಮದೇ ರೀತಿಯಲ್ಲಿ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಅದರಲ್ಲೋರ್ವ ಅಬ್ಬಾ... ಹೆಬ್ಬಾವಿನ ಅರಗಿಸಿಕೊಳ್ಳುವ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)