

ನವದೆಹಲಿ: ಕಾಡಿನ ನಡುವಿನ ರಸ್ತೆಯಲ್ಲಿ ಎದುರಿಗೆ ಬಂದ ಬೈಕ್ ಸವಾರರನ್ನು ಆನೆಯೊಂದು ಅಟ್ಟಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀಧರ್.ವಿ, ಎಂಬುವರು ಸೆರೆಹಿಡಿದ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಾಂತ್ ನಂದ ಅವರು ತಮ್ಮ ಟ್ವಿಟರ್ನಲ್ಲಿ ಬುಧವಾರ ಬೆಳಗ್ಗೆ ಶೇರ್ ಮಾಡಿಕೊಂಡಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವಿಡಿಯೋದಲ್ಲಿ ಏನಿದೆ?: 16 ಸೆಕೆಂಡಿನ ವಿಡಿಯೋದಲ್ಲಿ ಮರಿಗಳೊಂದಿಗೆ ಕಾಡಿನ ನಡುವಿನ ರಸ್ತೆಯನ್ನು ದಾಟುವಾಗ ಅದನ್ನು ಲೆಕ್ಕಿಸದೇ ಬಂದ ಬೈಕ್ ಸವಾರರಿಬ್ಬರನ್ನು ನೋಡಿ ದೈತ್ಯ ಆನೆ ಕೆರಳುತ್ತದೆ. ತಕ್ಷಣ ಬೈಕ್ ಅನ್ನು ಅಟ್ಟಿಸಿಕೊಂಡು ಹೋದಾಗ, ಸವಾರು ಹೆದರಿ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಎದ್ನೋ ಬಿದ್ನೋ ಎಂಬಂತೆ ಓಡುತ್ತಾರೆ. ಇತ್ತ ಬೈಕ್ ಬೀಳುತ್ತಿದ್ದಂತೆ ಆನೆಗೆ ಏನನ್ನಿಸುತ್ತದೋ ಏನೋ ಅದು ಕೂಡ ಕಾಡಿನ ಒಳಗಡೆ ಕಾಲ್ಕಿಳುತ್ತದೆ. ಈ ವೇಳೆ ಸ್ವಲ್ಪ ದೂರದಲ್ಲಿ ಕಾರೊಂದು ನಿಂತಿರುವುದನ್ನು ಗಮನಿಸಬಹುದು.
ವಿಡಿಯೋ ಕುರಿತು ಬರೆದುಕೊಂಡಿರುವ ಸುಸಾಂತ್ ನಂದ ಅವರು ಮರಿಗಳೊಂದಿಗೆ ಆನೆ ರಸ್ತೆ ದಾಟುವಾಗ ಯಾರಾದರೂ ತೊಂದರೆ ನೀಡಿದರೆ ಆನೆ ನಿಜಕ್ಕೂ ಕೆರಳುತ್ತದೆ. ಒಳ್ಳೆಯ ಆನೆಯು ಕೂಡ ರಾಕ್ಷಸ ಆನೆಯಾಗಿ ದಾಳಿ ಮಾಡುತ್ತದೆ. ಅತಿರೇಖ ಸಾಕು ಎಂದು ಸಲಹೆ ನೀಡಿದ್ದಾರೆ.
ಈಗಾಗಲೇ ವಿಡಿಯೋವನ್ನು 4 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಸಾಕಷ್ಟು ಮಂದಿ ಕಾಮೆಂಟ್ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)