ರಾತ್ರಿ ಭಿಕ್ಷುಕರ ಜತೆ ನಿದ್ರೆ... IPS​ ಅಧಿಕಾರಿಯಾಗಲು ಈ ಆಟೋ ಚಾಲಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ!

ips manoj kumar
Published on

ಆರಂಭಿಕ ದಿನಗಳಲ್ಲಿ ದೊಡ್ಡ ಹರಸಾಹಸವೇ ಪಟ್ಟು, ಅವರಿವರ ಬೈಗುಳಕ್ಕೆ ಗುರಿಯಾಗಿ, ಹಂತ ಹಂತವಾಗಿ ಯಶಸ್ಸಿನ ಹಾದಿ ತಲುಪಿ, ಅಪಾರ ಜನಮನ್ನಣೆ ಸ್ವೀಕರಿಸುವವರು ಅದೆಷ್ಟೋ. ಈ ಸಾಲಿನಲ್ಲಿ ನಮಗೆ ಮೊದಲು ನೆನಪಾಗೋದೇ ಸೆಲೆಬ್ರಿಟಿಗಳು. ಮೊದ ಮೊದಲು ಕೆಟ್ಟ ಅನುಭವ, ವಿಪರೀತ ಶ್ರಮ ವಹಿಸಿ ಬೆಳೆದು ಬಂದ ಅನೇಕ ಕಲಾವಿದರು ಇಂದು ದೊಡ್ಡ ಸ್ಟಾರ್​ಗಳಾಗಿ ಮಿಂಚಿ, ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ತಮ್ಮ ಆರಂಭದ ದಿನಗಳಲ್ಲಿ ಒಂದೇ ಒಂದು ಅವಕಾಶ ಗಿಟ್ಟಿಸಿಕೊಳ್ಳಲು ಕಷ್ಟಪಡುವ ನಟ-ನಟಿಯರು, ಒಂದೆರೆಡು ಚಿತ್ರಗಳು ಸೂಪರ್ ಹಿಟ್ ಅಥವಾ ಬ್ಲಾಕ್​ಬಸ್ಟರ್​ ಸಾಲಿಗೆ ಸೇರಿಕೊಂಡರೆ ಸಾಕು ತಮಗೆ ಸ್ಟಾರ್​ ಪಟ್ಟಕ್ಕೆ ಫಿಕ್ಸ್​ ಆಗ್ತಾರೆ. ಆದ್ರೆ, ಸಾಮಾನ್ಯ ಅದರಲ್ಲೂ ಸಿನಿರಂಗ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಸಾಧಿಸುವ ಛಲವಾದಿಗಳು ಆರಂಭಿಕ ಹಂತದಲ್ಲಿ ಕಠಿಣ ಪರಿಸ್ಥಿತಿಯನ್ನು ಭೇದಿಸಿ, ತದನಂತರ ಅದ್ಭುತ ಸಾಧನೆಗೈದರು ಸಹ ಅವರ ಹೆಸರು ಮಾತ್ರ ಸೆಲೆಬ್ರಿಟಿಗಳಂತೆ ಹೊರಹೊಮ್ಮುವುದಿಲ್ಲ. ಇದೊಂದು ರೀತಿ ಬೇಸರದ ಸಂಗತಿ.

ಹೆಸರಾಂತ ಐಪಿಎಸ್​ ಅಧಿಕಾರಿಯ ರೋಚಕ ಕಥೆ

ನಮಗೆಲ್ಲ ಸ್ಟಾರ್​ ನಟ-ನಟಿಯರು ಅಂದು ಕಷ್ಟಪಟ್ಟು ಇಂದು ದೊಡ್ಡ ಸಾಧಕರಾಗಿ ಹೊರಹೊಮ್ಮಿರುವುದು ಗೊತ್ತು, ಈ ವಿಷಯಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ತಿಳಿದಿದೆ. ಆದ್ರೆ, ಇಲ್ಲೊಬ್ಬರು ವ್ಯಕ್ತಿ ತಮ್ಮ ಬಾಲ್ಯವನ್ನು ಕಡು ಬಡತನದ ಕುಟುಂಬದಲ್ಲಿ ಕಳೆದು, ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ಎದುರಿಸಿದರು. ತಂದೆ-ತಾಯಿ, ತಮ್ಮ, ಅಜ್ಜಿಯನ್ನು ಬಿಟ್ಟು ಗೊತ್ತಿಲ್ಲದ ಊರಿಗೆ ಹೋಗಿ, ತಿಳಿಯದ ವಿಷಯದ ಬಗ್ಗೆ ಅಧ್ಯಯನ ಮಾಡಲು ಹೊರಟವರು ಇಂದು ಯಾರೂ ಊಹಿಸದ ಸಾಧನೆ ಮಾಡಿದ್ದು, ತಮ್ಮನ್ನು ಹೀಯಾಳಿಸಿದವರ ಮುಂದೆಯೇ ಸಾಧಕನಾಗಿ ಮೆರೆದಿರುವುದು ಇತಿಹಾಸ. ಅಸಲಿಗೆ ಇವರ ಜೀವನವೇ ಸಿನಿಮಾವಾಗಿ ತೆರೆ ಮೇಲೆ ಬಂದಿದ್ದು, ಇಂದು ಅನೇಕರಿಗೆ ಸ್ಫೂರ್ತಿದಾಯಕ.

ಅಸಲಿಗೆ ಯಾರು ಆ ವ್ಯಕ್ತಿ? 

ips officer

ಯಾರು ಈ ವ್ಯಕ್ತಿ? ಚಿತ್ರನಟ ಅಲ್ಲ ಅಂತೀರಾ, ಸೆಲೆಬ್ರಿಟಿ ಅಲ್ಲವೇ ಅಲ್ಲ ಎಂದು ಹೇಳ್ತೀರಾ. ಹೀಗಿದ್ದಮೇಲೆ ಇವರು ಯಾರಿರಬಹುದು ಎಂದು ಊಹಿಸಲು ಸಾಧ್ಯವಾಗ್ತಿಲ್ಲ ಎಂಬ ನಿಮ್ಮ ಗೊಂದಲಕ್ಕೆ ಇಲ್ಲಿದೆ ನೋಡಿ ಉತ್ತರ. ಅಸಲಿಗೆ ಇವರು ಬೇರಾರು ಅಲ್ಲ, ಐಪಿಎಸ್​ ಅಧಿಕಾರಿ ಮನೋಜ್ ಕುಮಾರ್ ಶರ್ಮ​. ಇಂದು ಮಹಾರಾಷ್ಟ್ರ ಪೊಲೀಸ್‌ನಲ್ಲಿ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ (ಡಿಐಜಿ) ಅಧಿಕಾರಿಯಿಂದ ಇನ್‌ಸ್ಪೆಕ್ಟರ್ ಜನರಲ್ (ಐಜಿ) ಆಗಿ ಬಡ್ತಿ ಪಡೆದಿರುವ ಮನೋಜ್​, 2003, 2004 ಮತ್ತು 2005ರ ಬ್ಯಾಚ್‌ನ ಐಪಿಎಸ್​ ಅಧಿಕಾರಿಗಳ ಪ್ರಗತಿಯನ್ನು ಕ್ಯಾಬಿನೆಟ್ ನೇಮಕಾತಿ ಸಮಿತಿ (ACC) ಅನುಮೋದಿಸಿದ ನಂತರ ಈ ಬಡ್ತಿ ಸ್ವೀಕರಿಸಿದರು. 2005ರ ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಮನೋಜ್ ಶರ್ಮಾ ಅವರು ತಮ್ಮ ವೃತ್ತಿ ಜೀವನದಲ್ಲಿ ತಲುಪಿದ ಮಹತ್ವದ ಮೈಲಿಗಲು ನಿಜಕ್ಕೂ ಅನೇಕರಿಗೆ ಸ್ಫೂರ್ತಿದಾಯಕ. ಅದರಲ್ಲೂ ಐಪಿಎಸ್​, ಐಎಎಸ್​ ಅಧಿಕಾರಿಯಾಗುವ ಕನಸು ಹೊತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇವರ ಜೀವನವೇ ಸ್ಫೂರ್ತಿ ಎಂದರೆ ಖಂಡಿತ ತಪ್ಪಾಗಲಾರದು.

ಮನೋಜ್​ ಕುಮಾರ್​ ಶರ್ಮ ಬೆಳೆದು ಬಂದ ಹಾದಿ

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಜನಿಸಿದ ಮನೋಜ್ ಕುಮಾರ್​ ಅವರ ಜೀವನ ಎಲ್ಲರಂತಿರಲಿಲ್ಲ. ಕಡು ಬಡತನದಲ್ಲಿ ಹುಟ್ಟಿದ ಮನೋಜ್​ಗೆ ಶೈಕ್ಷಣಿಕ ಜೀವನ ಅತ್ಯಂತ ಕಠಿಣವಾಗಿತ್ತು. ಶಾಲೆಯಲ್ಲಿ ಕೊಡುತ್ತಿದ್ದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಅನ್ಯಾಯದ ವಿಧಾನಗಳನ್ನು ಅವಲಂಬಿಸಿದ್ದ ಮನೋಜ್​, ಇದು ಸರಿಯಲ್ಲ ಎಂಬುದನ್ನು ದಕ್ಷ ಪೊಲೀಸ್ ಅಧಿಕಾರಿಯೊಬ್ಬರ ಮಾತುಗಳಿಂದ ಪ್ರೇರಿತರಾದರು. ದ್ವಿತೀಯ ಪಿಯುಸಿ ಮುಗಿಸಿಕೊಂಡ ಅವರು, ಆರ್ಥಿಕ ಬಿಕ್ಕಟ್ಟಿನಿಂದ ಪರದಾಡುತ್ತಿದ್ದ ತಮ್ಮ ಕುಟುಂಬವನ್ನು ಬೆಂಬಲಿಸಲು ಸಹೋದರನೊಂದಿಗೆ ಆಟೋ ಓಡಿಸಲು ಪ್ರಾರಂಭಿಸುತ್ತಾರೆ. ಇದೆಲ್ಲದರ ನಡುವೆಯೇ ದೂರದ ದೆಹಲಿಗೆ ತೆರಳುವ ಮನೋಜ್​, ಐಪಿಎಸ್​ ಅಧಿಕಾರಿಯಾಗುತ್ತೇನೆ ಎಂದು ಮನೆಯವರನ್ನು ತೊರೆದು ಹೋಗುತ್ತಾರೆ.

ಆನಂತರ ಹಣ್ಣವಿಲ್ಲದೆ ಭಾರೀ ಸಂಕಷ್ಟಕ್ಕೆ ಸಿಲುಕುವ ಮನೋಜ್ ಕುಮಾರ್​, ಗೊತ್ತಿಲ್ಲದ ಊರಿನಲ್ಲಿ ಏನು ಮಾಡಬೇಕೆಂದು ತಿಳಿಯದೆ, ದೇವಾಲಯದ ಮುಂದೆ ಭಿಕ್ಷುಕರ ಮಧ್ಯೆಯೇ ನಿದ್ರಿಸಿ, ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಯಾರ ಬೆಂಬಲವಿಲ್ಲದೆ ಏಕಾಂಗಿಯಾಗಿ ಹೋರಾಡುವ ಮನೋಜ್​ ಕುಮಾರ್ ಶರ್ಮ, ಮೂರು ತಾಸು ನಿದ್ರೆಯನ್ನು ಮಾಡುತ, 7 ಗಂಟೆ ಓದುತ, ಹಿಟ್ಟಿನ ಮಿಲ್​ನಲ್ಲಿ ಕೆಲಸ ಮಾಡಿಕೊಂಡು ತಮ್ಮ ಗುರಿಯನ್ನು ತಲುಪುತ್ತಾರೆ. ಅಸಲಿಗೆ ಇಂದು ಅವರ ಕಥೆ ಪುಸ್ತಕ, ದಿನಪತ್ರಿಕೆಗಳಿಗಿಂತ ಬೆಳ್ಳಿ ಪರದೆಯ ಮೇಲೆ ರಾರಾಜಿಸಿರುವುದು ನೀವೆಲ್ಲಾ ಈಗಾಗಲೇ ನೋಡಿದ್ದೀರಿ. ಐಪಿಎಸ್​ ಅಧಿಕಾರಿ ಮನೋಜ್ ಶರ್ಮ ಅವರ ಜೀವನವನ್ನು ಆಧರಿಸಿ, ತೆರೆಗೆ ತಂದ ಚಿತ್ರವೇ '12 ಫೇಲ್'.

ಈ ಬಯೋಪಿಕ್​ ಚಿತ್ರಕ್ಕೆ ದೇಶವ್ಯಾಪಿ ಅಪಾರ ಮೆಚ್ಚುಗೆಯ ಜತೆ ಪ್ರಶಂಸೆ ಕೂಡ ವ್ಯಕ್ತವಾಯಿತು. ಲಕ್ಷಾಂತರ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿ ತುಂಬಿದ ಈ ಚಿತ್ರ ಆಸ್ಕರ್​ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದೆ ಎಂಬುದು ಮತ್ತಷ್ಟು ವಿಶೇಷ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net