BBKS 11: ಈ ಕಾರಣಕ್ಕೆ ಸೀಸನ್​​ 11ರ ನಿರೂಪಣೆ ಬೇಡವೆಂದಿದ್ರು 'ಕಿಚ್ಚ'!

sudeep bbks11
Published on

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss) ಮನರಂಜನಾ ಕಾರ್ಯಕ್ರಮಕ್ಕೆ ಇದೀಗ ಹೊಸ ರೂಪ ಸಿಕ್ಕಿದ್ದು,​ ಸೀಸನ್ 10ರ ಯಶಸ್ಸಿನ ನಂತರ ಸೀಸನ್​ 11 ಸಖತ್ ಸದ್ದು ಮಾಡುತ್ತಿದೆ. ಸತತ 11 ಸೀಸನ್​ಗಳನ್ನು ತಮ್ಮ ಖಡಕ್​ ಮಾತು, ವಿಭಿನ್ನ ಶೈಲಿಯಿಂದಲೇ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep)​, ಒಂದಷ್ಟು ಗೊಂದಲಗಳ ನಡುವೆ ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದು ಅವರ ಅಪಾರ ಅಭಿಮಾನಿ ಬಳಗಕ್ಕೆ ಭಾರೀ ಖುಷಿ ನೀಡಿತು. ಅಸಲಿಗೆ ಕಿಚ್ಚ ನಿರೂಪಣೆ ಮಾಡೋದಿಲ್ಲ ಎಂದು ಹೇಳಿದ್ಯಾಕೆ? ಎಂಬ ಪ್ರಶ್ನೆಗಳು ಕನ್ನಡಿಗರಲ್ಲಿ ತೀವ್ರವಾಗಿ ಕಾಡುತ್ತಿತ್ತು. ಆದ್ರೆ, ಅದರ ಹಿಂದಿದ್ದ ಕಾರಣ ಹೀಗಿದೆ.

ಸೀಸನ್​ 10ರ ವಿನ್ನರ್​ ಪಟ್ಟ ಯಾರ ಪಾಲಾಗಲಿದೆ ಎಂಬ ಒಂದೇ ಒಂದು ಪ್ರಶ್ನೆ ವೀಕ್ಷಕರನ್ನು ಹೇಗೆ ಬೆಂಬಿಡದೆ ಕಾಡುತ್ತಿತ್ತೋ, ಅದೇ ರೀತಿ ಕಿಚ್ಚ ಸುದೀಪ್ ಅವರ ನಿರೂಪಣೆ ಸೀಸನ್​ 11ರ ಕಾರ್ಯಕ್ರಮಕ್ಕೆ ಇರಲಿದೆಯೇ ಎಂಬುದು ಜನರ ತಲೆಯಲ್ಲಿ ಬಗೆಹರಿಯದ ಸಮಸ್ಯೆಯಾಗಿ ಕಾಡುತ್ತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದೀಪ್​ ಸೀಸನ್​ 11ರ ಆ್ಯಂಕರ್​​ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡಿತ್ತು. ಆದ್ರೆ, ಕಡೆಗೂ ಆ ಗೊಂದಲಗಳಿಗೆ ತೆರೆ ಎಳೆಯಲಾಗಿದ್ದು, ಬಿಗ್ ಬಾಸ್​ ಸೀಸನ್ 11 ಅನ್ನು ಕಿಚ್ಚನೇ ನಡೆಸಿಕೊಡುವುದು ಖಚಿತವಾಯಿತು. ಆದ್ರೆ, ಅವರ ನಿರೂಪಣೆ ಬೇಡ ಎನ್ನಲು ಇದ್ದ ಕಾರಣ ಸಿನಿಮಾ ಶೂಟಿಂಗ್​ ಮತ್ತು ಸಮಯದ ಅಭಾವ.

sudeep bbks11

ಜುಲೈ 28, 2022ರಂದು ವಿಕ್ರಾಂತ್ ರೋಣ ಬಿಡುಗಡೆಯಾಗಿದ್ದು ಬಿಟ್ಟರೆ ನಾಯಕನಾಗಿ ಸುದೀಪ್ ಅಭಿನಯದ ಇನ್ಯಾವ ಚಿತ್ರಗಳು ಇಲ್ಲಿಯವರೆಗೆ ತೆರೆಗೆ ಬಂದಿಲ್ಲ. ಬಿಗ್ ಬಾಸ್ (BBKS 11)​ ಒಂದು ದೊಡ್ಡ ರಿಯಾಲಿಟಿ ಶೋ ಆದ ಕಾರಣ ಇದರ ಚಿತ್ರೀಕರಣದ ಕೆಲಸಗಳಲ್ಲಿ ಕಿಚ್ಚ ಬಹಳ ಬ್ಯುಸಿಯಾಗುತ್ತಿದ್ದರು. ಒಂದು ವಾರದಲ್ಲಿ ಮೂರು ದಿನ ಇದಕ್ಕಾಗಿಯೇ ಮೀಸಲಿಡುತ್ತಿದ್ದರು. ಇಲ್ಲಿಯೂ ಶೂಟಿಂಗ್ ಮುಗಿಸಿ, ಒಪ್ಪಿಕೊಂಡ ಇತರೆ ಸಿನಿಮಾಗಳ ಚಿತ್ರೀಕರಣ ಕೂಡ ಮುಗಿಸುವ ಜವಾಬ್ದಾರಿ ಅವರ ಮೇಲಿತ್ತು. ಇದರೊಟ್ಟಿಗೆ ಕುಟುಂಬದವರಿಗೆ ಸಮಯ, ಖಾಸಗಿ ಕೆಲಸಗಳನ್ನು ಪೂರೈಸಿಕೊಳ್ಳುವುದು ಸೇರಿದಂತೆ ಒಂದಷ್ಟು ವಿಚಾರಗಳಿಂದ ಸುದೀಪ್​ ಸೀಸನ್​ 11ರ ನಿರೂಪಣೆ ಜವಾಬ್ದಾರಿಯನ್ನು ಹೊರಲು ಇಚ್ಛಿಸಲಿಲ್ಲ.

ತಮಗೆ ಹಾಗೂ ತಮ್ಮವರಿಗೆ ಸಮಯ ಮೀಸಲಿಡಲು ಆಗದ ಕಿಚ್ಚ, ಕೆಲವು ದೊಡ್ಡ ಪ್ರಾಜೆಕ್ಟ್​ಗಳ ಚಿತ್ರೀಕರಣಗಳನ್ನು ಮುಗಿಸುವ ಉದ್ದೇಶದಿಂದ ಈ ಬಾರಿಯ ಬಿಗ್ ಬಾಸ್​ ಸೀಸನ್ ನಡೆಸಿಕೊಡಲು ಬಯಸಿಲಿಲ್ಲ. ಹೀಗಾಗಿಯೇ ಈ ಒಂದು ಗೊಂದಲ ಕನ್ನಡಿಗರಲ್ಲಿ ಕಡೆಯವರೆಗೂ ಕಾಡಲು ಕಾರಣ. ಅಂತಿಮವಾಗಿ ವಾಹಿನಿ ಮತ್ತು ಬಿಗ್​ ಬಾಸ್​ ತಂಡ ಖುದ್ದಾಗಿ ಸುದೀಪ್ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿ, ಶೋ ನಿರೂಪಣೆ ಮಾಡುವಂತೆ ಒಪ್ಪಿಸಿದರು. ಇನ್ನು ಸೆ.29ರಂದು ಗ್ರ್ಯಾಂಡ್​ ಓಪನಿಂಗ್​ನಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಡುವ ಕಿಚ್ಚ, ಯಾವ ಸೆಲೆಬ್ರಿಟಿಗಳನ್ನು ಬಿಗ್ ಮನೆಯೊಳಗೆ ಕಳುಹಿಸಲಿದ್ದಾರೆ ಎಂಬುದನ್ನು ಸದ್ಯ ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net