

ಮುಂಬೈ: ಇಂಡೋ-ಪೆಸಿಫಿಕ್ ಜಲ ಮಾರ್ಗವನ್ನು ಸುರಕ್ಷಿತವಾಗಿಡುವುದು ಭಾರತೀಯ ನೌಕಾ ಪಡೆಯ ಪ್ರಮುಖ ಉದ್ದೇಶವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಭಾನುವಾರ ಇಲ್ಲಿನ ನೇವಲ್ ಡಾಕ್ಯಾರ್ಡ್ ನಲ್ಲಿ ‘ಐಎನ್ಎಸ್ ವಿಶಾಖಪಟ್ಟಣಂ’ ಸಮರ ನೌಕೆಯನ್ನು ನೇವಿಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೆ, ಚೀನಾದ ನಡವಳಿಕೆಯನ್ನು ಪರೋಕ್ಷವಾಗಿ ಟೀಕಿಸಿದರು.
ಇದು 35,000 ಕೋಟಿ ರೂಪಾಯಿ ಮೊತ್ತದ ಪ್ರಾಜೆಕ್ಟ್ 15ಬಿ ಯೋಜನೆಯ ಸ್ಟೆಲ್ತ್ ನಿರ್ದೇಶಿತ ಕ್ಷಿಪಣಿ ನಾಶಕ ನೌಕೆಯಾಗಿದೆ. ಹಿಂದು ಮಹಾಸಾಗರ-ಶಾಂತ ಸಾಗರ (ಇಂಡೋ-ಪೆಸಿಫಿಕ್) ಮಾರ್ಗ ಒಂದು ಪ್ರಮುಖ ಮಾರ್ಗವಾಗಿರುವುದರಿಂದ ಜಗತ್ತಿನ ಆರ್ಥಿಕತೆಗೆ ಮಹತ್ವದ್ದಾಗಿದೆ. ಆದ್ದರಿಂದ ಅದರ ಸುರಕ್ಷತೆಯನ್ನು ಖಾತರಿಪಡಿಸುವುದು ನೇವಿಯ ಗುರಿಯಾಗಿದೆ. ಇಡೀ ಜಗತ್ತು ಮುಂಬರುವ ದಿನಗಳಲ್ಲಿ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿದೆ. ರಕ್ಷಣಾ ಬಜೆಟ್ ಹೆಚ್ಚಿಸಲಿದೆ. ದೇಶೀಯ ಹಡಗು ನಿರ್ಮಾಣ ಕೇಂದ್ರ ಅಭಿವೃದ್ಧಿ ಪಡಿಸುವತ್ತ ಭಾರತ ಮುನ್ನಡೆಯುತ್ತಿದೆ ಎಂದು ಸಚಿವರು ಹೇಳಿದರು. ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ಕರಂ ಬೀರ್ ಸಿಂಗ್ ಕಾರ್ಯಕ್ರಮದಲ್ಲಿದ್ದರು.
ಕೆಲವು ಹೊಣೆಗೇಡಿ ರಾಷ್ಟ್ರಗಳು ಸ್ವಹಿತವನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡು ಅಂತಾರಾಷ್ಟ್ರೀಯ ಸಾಗರ ಕಾನೂನು, ನಿಯಮಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುತ್ತಿವೆ. ಇದು ಜಗತ್ತಿಗೆ ಒಳಿತನ್ನು ಉಂಟುಮಾಡಲ್ಲ. | ರಾಜನಾಥ್ ಸಿಂಗ್ ರಕ್ಷಣಾ ಸಚಿವ
38 ನೌಕೆಗಳು ಸ್ವದೇಶಿ: ವಾಯುಸೇನೆ ಬೇಡಿಕೆಯಿಟ್ಟಿರುವ 41 ನೌಕೆಗಳ ಪೈಕಿ 38 ನೌಕೆಗಳನ್ನು ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ. ದೇಶೀಕರಣಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ. ‘ವಿಶಾಖಪಟ್ಟಣಂ’ನಲ್ಲಿ ಹಲವು ಮಾರಕ ಅಸ್ತ್ರಗಳು ಮತ್ತು ಸೂಕ್ಷ್ಮಸಂವೇದಿಗಳನ್ನು (ಸೆನ್ಸರ್) ಅಳವಡಿಸಲಾಗಿದೆ. ಸೂಪರ್ಸಾನಿಕ್ ಸರ್ಫೆಸ್ ಟು ಸರ್ಫೆಸ್ ಹಾಗೂ ಸರ್ಫೆಸ್ ಟು ಏರ್ ಮಿಸೈಲ್, ಮೀಡಿಯಂ ಮತ್ತು ಶಾರ್ಟ್-ರೇಂಜ್ ಗನ್ಗಳು, ಜಲಾಂತರ್ಗಾಮಿ-ನಿರೋಧಕ ರಾಕೆಟ್ಗಳು, ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಮರ ಹಾಗೂ ಸಂವಹನ ಸೂಟ್ಗಳು ಅವುಗಳಲ್ಲಿವೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು.
2 ಹೆಲಿಕಾಪ್ಟರ್: ಅತ್ಯಾಧುನಿಕ ಡಿಜಿಟಲ್ ಜಾಲದ ಎರಡು ಹೆಲಿಕಾಪ್ಟರ್ ಮತ್ತು ಬೋಟ್ಗಳನ್ನು ಹೊರಡಿಸುವ ಸಾಮರ್ಥ್ಯ ಈ ನೌಕೆಗಿದೆ. ಯುದ್ಧ ನಿರ್ವಹಣಾ ವ್ಯವಸ್ಥೆಗಳು ಮತ್ತು ಸಮಗ್ರ ವೇದಿಕೆ ನಿರ್ವಹಣಾ ವ್ಯವಸ್ಥೆಗಳು ಕೂಡ ಅದರಲ್ಲಿವೆ. 4 ನೌಕೆಗಳು: ಪ್ರೊಜೆಕ್ಟ್ 15ಬಿ ಅಡಿಯಲ್ಲಿ ಒಟ್ಟು ನಾಲ್ಕು ಸಮರ ನೌಕೆಗಳನ್ನು ನಿರ್ವಿುಸಲಾಗುತ್ತದೆ. ಇನ್ನೊಂದು ನೌಕೆ 2023ರಲ್ಲಿ, ಉಳಿದೆರಡನ್ನು 2025ರಲ್ಲಿ ಸೇರ್ಪಡೆ ಮಾಡುವ ಯೋಜನೆಯಿದೆ. ಮರ್ಮಗೋವಾ, ಇಂಫಾಲ್ ಮತ್ತು ಸೂರತ್ ಉಳಿದ ಮೂರು ಕ್ಷಿಪಣಿ ನಾಶಕ ನೌಕೆಗಳ ಹೆಸರು.
ಕಾಶ್ಮೀರ ಸೇರಿದಂತೆ ಎಲ್ಒಸಿಗೆ ಹೊಂದಿಕೊಂಡಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ನಿಯೋಜನೆಗೊಳ್ಳುವ ಗಡಿ ಭದ್ರತಾ ಪಡೆಯ ಸಿಬ್ಬಂದಿಗೆ ಇನ್ನು ಉಕ್ಕಿನ ರಕ್ಷಣೆ ಸಿಗಲಿದೆ. ಎಲ್ಒಸಿಯುದ್ದಕ್ಕೂ ಇರುವ ಸುಮಾರು 115 ಎಫ್ಡಿಎಲ್ಗಳ ತಂಗುದಾಣಗಳನ್ನು ಉಕ್ಕಿನಿಂದ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ 35 ಕೋಟಿ ರೂ. ವೆಚ್ಚ ತಗುಲುವ ಅಂದಾಜಿದೆ. ಗಡಿನಿಯಂತ್ರಣ ರೇಖೆಯ ವ್ಯಾಪ್ತಿ ಒಟ್ಟು 772 ಕಿ.ಮೀ ಆಗಿದ್ದು, ಈ ಪೈಕಿ ಸುಮಾರು 430 ಕಿ.ಮೀ ಉದ್ದದ ಅಂತರವು ಜಮ್ಮು ಮತ್ತು ಕಾಶ್ಮೀರದ ವ್ಯಾಪ್ತಿಗೆ ಬರುತ್ತದೆ. 8ರಿಂದ 16 ಸಾವಿರ ಅಡಿ ಎತ್ತರದಲ್ಲಿ ಈ ಸಿಬ್ಬಂದಿ ಸದ್ಯ ಕಬ್ಬಿಣದ ಶೀಟ್ಗಳನ್ನು ಬಳಸಿ ಸಿದ್ಧಪಡಿಸಿರುವ ತಂಗುದಾಣದಲ್ಲಿ ಪಡಿತರ ಹಾಗೂ ಶಸ್ತ್ರಾಸ್ತ್ರಗಳನ್ನು ಇಟ್ಟು ದಿನದೂಡುತ್ತಿದ್ದಾರೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.