

ಬೆಂಗಳೂರು: ದಿಗ್ಗಜ ಐಟಿ ಕಂಪನಿಗಳ ಪೈಕಿ ಒಂದಾಗಿರುವ ಇನ್ಫೊಸಿಸ್ನ ಸಂಸ್ಥಾಪಕ ನಾರಾಯಣಮೂರ್ತಿ ಅವರು ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದಿರುವುದು ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಪರ-ವಿರೋಧ ಅಭಿಪ್ರಾಯಗಳಿಗೂ ಗುರಿಯಾಗಿದೆ.
ಇದೀಗ ಇನ್ಫೊಸಿಸ್ ಸಿಇಒ ಸಂಬಳವೂ ಚರ್ಚೆಗೀಡಾಗಿದ್ದು, ಇತರ ಕೆಲವು ಐಟಿ ಕಂಪನಿಗಳ ಸಿಇಒ ವೇತನ ಕೂಡ ಜನರ ಕಣ್ಣು ಕುಕ್ಕುವಂತೆ ಮಾಡಿದೆ. ಮಾತ್ರವಲ್ಲ, ಫ್ರೆಷರ್ಸ್ಗೆ ಹೋಲಿಸಿದರೆ ಸಿಇಒಗಳ ವೇತನ ಹೆಚ್ಚಳದಲ್ಲಿ ಕಳೆದೊಂದು ದಶಕದಲ್ಲಿ ಭಾರಿ ಅಸಮತೋಲನ ಆಗಿರುವುದು ಕೂಡ ಮುನ್ನೆಲೆಗೆ ಬಂದಿದೆ.
ನಾರಾಯಣಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ, ಫ್ರೆಷರ್ಸ್ಗಿಂತ ಇನ್ಫೊಸಿಸ್ ಸಿಇಒ ವೇತನ 2,200 ಪಟ್ಟು ಹೆಚ್ಚಿದೆ. ವಾರಕ್ಕೆ 168 ಗಂಟೆಗಳಷ್ಟೇ ಇರುವುದು, ಸಿಇಒ ಮತ್ತು ಫ್ರೆಷರ್ಸ್ ಕ್ರಮವಾಗಿ ವಾರಕ್ಕೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ಫೊಸಿಸ್, ವಿಪ್ರೋ, ಟಿಸಿಎಸ್, ಟೆಕ್ ಮಹಿಂದ್ರಾ, ಎಲ್ ಆ್ಯಂಡ್ ಟಿ ಇನ್ಫೊಟೆಕ್, ಎಚ್ಸಿಎಲ್, ಮೀಡಿಯನ್ ಕಂಪನಿಗಳ ಸಿಇಒ ಮತ್ತು ಫ್ರೆಷರ್ಸ್ ವೇತನ ಹತ್ತು ವರ್ಷಗಳ ಹಿಂದೆ ಎಂದರೆ 2012ರಲ್ಲಿ ಎಷ್ಟಿತ್ತು ಹಾಗೂ 2022ರಲ್ಲಿ ಎಷ್ಟು ಕೊಡಲಾಗುತ್ತಿದೆ ಎಂಬ ಪಟ್ಟಿಯನ್ನೂ ಅವರು ಪೋಸ್ಟ್ ಮಾಡಿಕೊಂಡು ತಮ್ಮ ಪ್ರಶ್ನೆಯನ್ನು ಕೇಳಿದ್ದಾರೆ. ಸಿಇಒಗಳ ವಾರ್ಷಿಕ ಸಂಬಳ ಹತ್ತು ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದರೆ, ಫ್ರೆಷರ್ಸ್ ವಾರ್ಷಿಕ ವೇತನದಲ್ಲಿ ಅಂಥ ಹೆಚ್ಚಳ ಕಾಣದಿರುವುದೂ ಈ ಪಟ್ಟಿಯಲ್ಲಿ ಕಂಡುಬಂದಿದೆ.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಹಿಳೆಯೊಬ್ಬರು, ತಾವು 1999ರಲ್ಲಿ ಇನ್ಫೊಸಿಸ್ಗೆ ಫ್ರೆಷರ್ ಆಗಿ ಕೆಲಸಕ್ಕೆ ಸೇರಿದ್ದು ವಾರ್ಷಿಕ ವೇತನ ತೆರಿಗೆ ಸೇರಿ 3.55 ಲಕ್ಷ ರೂ. ಅಂದರೆ ತಿಂಗಳಿಗೆ 29 ಸಾವಿರ ರೂ. ಇತ್ತು. ವಾರಕ್ಕೆ 70 ಗಂಟೆಗಳ ಕೆಲಸ, ಕಾಂಪ್ ಆಫ್ ಕೂಡ ಇತ್ತು ಎಂದಿದ್ದಾರೆ. ಆದರೆ ಇನ್ಫೊಸಿಸ್ ಈಗಲೂ ಫ್ರೆಷರ್ಸ್ಗೆ ವಾರ್ಷಿಕ 3.72 ಲಕ್ಷ ರೂ. ವೇತನ ಕೊಡುತ್ತಿದೆ ಎಂದರೆ ನಂಬಲಾಗುತ್ತಿಲ್ಲ. ಇದನ್ನು ಶೋಷಣೆ ಎಂದು ಕರೆದರೂ ಕಡಿಮೆ ಎನಿಸುತ್ತದೆ ಎಂಬುದಾಗಿಯೂ ಆಕೆ ಹೇಳಿದ್ದಾರೆ.