

ನವದೆಹಲಿ: ಕರೊನಾ ನಿಗ್ರಹಕ್ಕೆ ಸಂಶೋಧಿಸಲಾಗಿರುವ ದೇಶೀಯ ಲಸಿಕೆ ಕೊವಾಕ್ಸಿನ್ ಔಷಧದ ಕ್ಲಿನಿಕಲ್ ಟ್ರಯಲ್ ಸದ್ಯ ಬೆಳಗಾವಿ ಸೇರಿ ದೇಶದ 9 ನಗರಗಳಲ್ಲಿ ನಡೆಯುತ್ತಿದೆ.
ವೈದ್ಯಕೀಯ ಸಂಶೋಧನಾ ಮಂಡಳಿ ದೇಶೀಯ ಲಸಿಕೆ ಕೊವಾಕ್ಸಿನ್ ಕ್ಲಿನಿಕಲ್ ಟ್ರಯಲ್ಗೆ ಆಯ್ಕೆ ಮಾಡಿಕೊಂಡಿರುವ ದೇಶದ 12 ವೈದ್ಯಕೀಯ ಸಂಸ್ಥೆಗಳಲ್ಲಿ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯೂ ಸೇರಿದೆ. ಇಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಜತೆಗೆ, ಉತ್ತರಪ್ರದೇಶದ ರಾಣಾ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ನಲ್ಲೂ ಕ್ಲಿನಿಕಲ್ ಟ್ರಯಲ್ ಆರಂಭವಾಗಿದೆ.
ಕ್ಲಿನಿಕಲ್ ಟ್ರಯಲ್ನಲ್ಲಿ 9 ಜನರಿಗೆ ಲಸಿಕೆ ನೀಡಲಾಗಿದೆ ಎಂದು ರಾಣಾ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ನ ಸಿಇಒ ವೆಂಕಟೇಶ್ ಚತುರ್ವೇದಿ ತಿಳಿಸಿದ್ದಾರೆ.
ಇದಲ್ಲದೇ, ಭುವನೇಶ್ವರದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಎಸ್ಯುಎಂ ಆಸ್ಪತ್ರೆಯಲ್ಲಿಯೂ ಈಗಾಗಲೇ ಕ್ಲಿನಿಕಲ್ ಟ್ರಯಲ್ ಆರಂಭವಾಗಿದೆ. ಅಭ್ಯರ್ಥಿಗಳಿಗೆ 14 ದಿನಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. ಪ್ರಾಯೋಗಿಕ ಲಸಿಕೆ ಪಡೆದುಕೊಳ್ಳಲು ಜನರಲ್ಲಿ ಅತೀವ ಉತ್ಸಾಹವಿದೆ. ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆದುಕೊಂಡಿದ್ದಾರೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಇನ್ನೊಂದೆಡೆ, ರೋಹ್ಟಕ್ ವೈದ್ಯಕೀಯ ಸಂಸ್ಥೆಯಲ್ಲಿ ಜು.17ರಂದೇ ಕ್ಲಿನಿಕಲ್ ಟ್ರಯಲ್ ಆರಂಭಿಸಲಾಗಿತ್ತು. ಸದ್ಯ ದೇಶಾದ್ಯಂತ 50ಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದ್ದು, ಫಲಿತಾಂಶಗಳು ಉತ್ತೇಜನಕಾರಿಯಾಗಿವೆ ಎಂದು ಕ್ಲಿನಿಕಲ್ ಟ್ರಯಲ್ ಮುಖ್ಯ ಸಂಶೋಧಕಿ ಡಾ. ಸವಿತಾ ವರ್ಮಾ ತಿಳಿಸಿದ್ದಾರೆ.
18ರಿಂದ 55 ವರ್ಷದೊಳಗಿನ ವ್ಯಕ್ತಿಗಳನ್ನು ಇದಕ್ಕೆ ಆಯ್ದುಕೊಳ್ಳಲಾಗಿದೆ. ಆರಂಭದಲ್ಲಿ ಕಡಿಮೆ ಡೋಸ್ ನೀಡಲಾಗುತ್ತದೆ. ಇದು ಮಾನವ ಬಳಕೆಗೆ ಸುರಕ್ಷಿತವಾಗಿದೆ ಎಂದು ಕಂಡು ಬಳಿಕ ಇನ್ನೂ 50 ಜನರಿಗೆ ಹೆಚ್ಚಿನ ಡೋಸ್ ನೀಡಲಾಗುತ್ತದೆ ಎಂದು ಏಮ್ಸ್ನ ಡಾ. ಸಂಜಯ್ ರೈ ಮಾಹಿತಿ ನೀಡಿದ್ದಾರೆ.
ಲಸಿಕೆ ಪಡೆದುಕೊಳ್ಳಲು ಈಗಾಗಲೇ 3,500 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ಹಂತದಲ್ಲಿ 375 ಜನರ ಮೇಲೆ ಲಸಿಕೆ ಪ್ರಯೋಗಿಸಲಾಗುತ್ತಿದೆ. ಹೈದರಾಬಾದ್ನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ದೇಶದ 8 ಕಡೆಗಳಲ್ಲಿ ಜಾರಿಯಲ್ಲಿದೆ.