

Banarasi bikini : ಬನಾರಸಿ ಬಿಕಿನಿ ತೊಟ್ಟ ಭಾರತೀಯ ಮಹಿಳೆಯೊಬ್ಬರು ವರನ ಕೊರಳಿಗೆ ಹಾರ ಹಾಕಿದ ಫೋಟೋಗಳು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರಿ ಸಂಚಲನವನ್ನೇ ಸೃಷ್ಟಿಸಿದೆ.
ಮದುವೆಯ ಸಾಂಪ್ರದಾಯಿಕ ಪದ್ಧತಿಗಳನ್ನು ಧ್ವಂಸಗೊಳಿಸುವುದು ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ವಿರೋಧಗಳು ವ್ಯಕ್ತವಾಯಿತು. ಭಾರಿ ವಿವಾದವನ್ನೇ ಹುಟ್ಟು ಹಾಕಿರುವ ಈ ಫೋಟೋಗಳು ಅಸಲಿಯೋ ಅಥವಾ ನಕಲಿಯೋ ಎಂದು ಹಲವರು ಅನುಮಾನ ಸಹ ವ್ಯಕ್ತಪಡಿಸಿದ್ದಾರೆ. ನಾವೀಗ ಸತ್ಯ ಏನೆಂಬುದನ್ನು ಪರಿಶೀಲಿಸೋಣ.
ರಾಷ್ಟ್ರೀಯ ಮಾಧ್ಯಮವೊಂದು ವೈರಲ್ ಆಗಿರುವ ಫೋಟೋಗಳ ಅಸಲಿಯತ್ತನ್ನು ಬಯಲು ಮಾಡಿದೆ. ಫೋಟೋದಲ್ಲಿರುವುದು ಉತ್ತರ ಪ್ರದೇಶದ ಲಖನೌ ಮೂಲದ ವಧು ಎಂದು ಹೇಳಿ ಜಾಲತಾಣದಲ್ಲಿ ಫೋಟೋವನ್ನು ಹರಿಬಿಡಲಾಗಿದೆ. ಆದರೆ, ಇದನ್ನು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ ಎಂದು ಮಾಧ್ಯಮಗಳು ಪತ್ತೆಹಚ್ಚಿವೆ.
ಫೋಟೋದಲ್ಲಿ ಯುವತಿಯೊಬ್ಬಳು ಹಳದಿ ಬಣ್ಣದ ಬನಾರಸಿ ಬಿಕಿನಿಯಲ್ಲಿ ವರನಿಗೆ ಹಾರ ಹಾಕಲು ನಿಂತಿದ್ದಾಳೆ. ವರನು ಕೂಡ ಶೇರ್ವಾನಿ ಧರಿಸಿ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ವಧುವಿನಂತೆಯೇ ಯುವತಿ ಆಭರಣ ಧರಿಸಿ, ಮೇಕಪ್ ಮಾಡಿಕೊಂಡಿದ್ದಾಳೆ. ಈ ಫೋಟೋದ ಮೂಲ ಯಾವುದು ಎಂದು ಹುಡುಕಿದಾಗ ರೆಡ್ಡಿಟ್ ಜಾಲತಾಣ ವೇದಿಕೆಗೆ ಕರೆದೊಯ್ಯಿತು.
ಮೂಲ ಚಿತ್ರವನ್ನು ರೆಡ್ಡಿಟ್ ಪೇಜ್ 'ದೇಸಿ ಅಡಲ್ಟ್ ಫ್ಯೂಷನ್'ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಫೋಟೋಗೆ 'ಮದುವೆ ಸೀಸನ್' ಎಂಬ ಶೀರ್ಷಿಕೆ ಇದೆ. ಫೋಟೋ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಅದನ್ನು ಎಐ ಸಹಾಯದಿಂದ ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಪರಿಶೀಲನೆಗಾಗಿ, ಡೀಪ್‌ಫೇಕ್ ಪತ್ತೆ ಸಾಧನವಾದ truemedia.org ನಿಂದ ಫೋಟೋವನ್ನು ಪರಿಶೀಲಿಸಿದಾಗ AI ನಿಂದ ರಚಿಸಲ್ಪಟ್ಟಿರುವ ಫೋಟೋ ಎಂದು ತಿಳಿದುಬಂದಿದೆ. (ಏಜೆನ್ಸೀಸ್)