

Andrea Jeremiah : ನಟಿ ಆಂಡ್ರಿಯಾ ಜರೆಮಿಯ, ಕಾಲಿವುಡ್ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯವಿರುವ ಹೆಸರು. ನಾಯಕಿ ಮತ್ತು ಖಳನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಂಡ್ರಿಯಾ, ತಮ್ಮ ಬೋಲ್ಡ್ ಲುಕ್ನಿಂದಲೇ ತುಂಬಾ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಆಂಡ್ರಿಯಾ ಗಾಯಕಿಯೂ ಹೌದು. ಸಾಕಷ್ಟು ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ತಮಿಳಿನಲ್ಲಿ ಆಯಿರತಿ ಒರುವನ್, ಮಂಗಾತ, ವಿಶ್ವರೂಪಂ, ವಾಡಚೆನ್ನೈ, ತುಪ್ಪರಿವಾಲನ್, ಅನಲ್ ಮೇಲೆ ಪಣಿತುಳಿ, ಅರಮನೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಆಂಡ್ರಿಯಾ ನಟಿಸಿದ್ದಾರೆ. ಅಂದಹಾಗೆ ಆಂಡ್ರಿಯಾ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನದಲ್ಲಿ ಬಹಿರಂಗಪಡಿಸಿದರು. ಚರ್ಮದ ಮೇಲೆ ಪರಿಣಾಮ ಬೀರುವ ಕಾಯಿಲೆಯಿಂದ ಆಂಡ್ರಿಯಾ ಬಳಲುತ್ತಿದ್ದಾರೆ.
ಇದೇ ಸಂದರ್ಶನದಲ್ಲಿ ಆಂಡ್ರಿಯಾ ಅವರು ತಮ್ಮ ಜೀವನದಲ್ಲಿ ನಡೆದಂತಹ ಕಹಿ ಘಟನೆಯೊಂದನ್ನು ನೆನೆದಿದ್ದಾರೆ. ಬಾಲ್ಯದಲ್ಲಿ ನಾನು ಲೈಂಗಿಕವಾಗಿ ಮತ್ತು ದೈಹಿಕವಾಗಿ ಕಿರುಕುಳಕ್ಕೊಳಗಾಗಿದ್ದೇನೆ. ಚಿಕ್ಕವಳಾಗಿದ್ದಾಗ ಬಸ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದು ಆಂಡ್ರಿಯಾ ಹೇಳಿದ್ದಾರೆ.
ನಾನು ಇಲ್ಲಿಯವರೆಗೆ ಎರಡು ಬಾರಿ ಮಾತ್ರ ಬಸ್‌ನಲ್ಲಿ ಪ್ರಯಾಣಿಸಿದ್ದೇನೆ. ಬಾಲ್ಯದಲ್ಲಿ ತಂದೆಯೊಂದಿಗೆ ನಾಗಪಟ್ಟಣದ ವೇಲಂಕಣಿಗೆ ಹೋಗುತ್ತಿದ್ದೆ. ಆಗ ನನಗೆ ಕೇವಲ 11 ವರ್ಷ. ನನ್ನ ತಂದೆ ನನ್ನ ಪಕ್ಕದಲ್ಲಿ ಕುಳಿತಿದ್ದರು. ಇದ್ದಕ್ಕಿದ್ದಂತೆ ನನ್ನ ಬೆನ್ನಿನ ಮೇಲೆ ಕೈ ಬಿದ್ದಂತೆ ಅನಿಸಿತು. ಬಹುಶಃ ನನ್ನ ತಂದೆ ಇರಬಹುದೆಂದು ಆರಂಭದಲ್ಲಿ ಭಾವಿಸಿದೆ. ಆದರೆ, ಆ ಎರಡು ಕೈಗಳು ಇದ್ದಕ್ಕಿದ್ದಂತೆ ನನ್ನ ಟೀ ಶರ್ಟ್ ಒಳಗೆ ಹೋದವು. ನಾನು ಅಪ್ಪನ ಕಡೆ ನೋಡಿದಾಗ ಅವರ ಕೈಗಳು ನನ್ನ ಕಣ್ಣ ಮುಂದೆಯೇ ಇದ್ದವು. ಆಗ ನಾನು ಅಪ್ಪನಿಗೆ ಏನೂ ಹೇಳಲಿಲ್ಲ. ನಾನು ಅಡ್ಜಸ್ಟ್ ಮಾಡಿಕೊಂಡು ಸ್ವಲ್ಪ ಮುಂದೆ ಕುಳಿತುಕೊಂಡೆ ಎಂದು ಆಂಡ್ರಿಯಾ ಹೇಳಿದರು.
ಅಂದು ನಾನೇಕೆ ಈ ವಿಚಾರವನ್ನು ನನ್ನ ತಂದೆ-ತಾಯಿಗೆ ಹೇಳಲಿಲ್ಲ ಎಂಬ ನನಗೆ ಗೊತ್ತಿಲ್ಲ. ಆತ ಮಾಡಿದ್ದು ತಪ್ಪು ಎಂದು ತಿಳಿದಿತ್ತು. ನಾನು ಅಪ್ಪನಿಗೆ ಹೇಳಿದ್ದರೆ ಅವರು ಏನಾದರೂ ಮಾಡುತ್ತಿದ್ದರು. ಆದರೆ, ನಾನು ಹೇಳಲಿಲ್ಲ. ಏಕೆಂದರೆ ನಾವು ನಮ್ಮ ಸಮಾಜದ ನಡುವೆ ಬೆಳೆದಿದ್ದೇವೆ. ಈ ಸಮಾಜದ ಇಂತಹ ಸಂಗತಿಗಳನ್ನು ದೊಡ್ಡದು ಮಾಡಬಾರದು ಎಂದು ಬಯಸುತ್ತದೆ ಎಂದು ಆಂಡ್ರಿಯಾ ಹೇಳಿದರು.
ಅದೇ ರೀತಿ ಆಂಡ್ರಿಯಾ ಒಮ್ಮೆ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಇದೇ ರೀತಿಯ ಘಟನೆ ನಡೆದಿದೆ. ಅಂದಿನಿಂದಲೇ ಇನ್ನು ಮುಂದೆ ಬಸ್ಸು ಹೋಗುವುದಿಲ್ಲ ಎಂದು ಆಂಡ್ರಿಯಾ ನಿರ್ಧರಿಸಿದ್ದಾರೆ. ಅನೇಕ ಯುವತಿಯರಿಗೆ ಕಾಲೇಜಿಗೆ ಹೋಗುವಾಗ ಬಸ್‌ನಲ್ಲಿ ಈ ರೀತಿಯ ಅನುಭವವಾಗಿದೆ. ಕಾಲೇಜಿಗೆ ಬಂದು ತರಗತಿಯಲ್ಲಿ ಕಣ್ಣೀರಿಟ್ಟಿದ್ದಾರೆ ಎಂದು ಆಂಡ್ರಿಯಾ ಹೇಳಿದ್ದಾರೆ. ಅನಲ್ ಮೇಲೆ ಪಣಿತುಲಿ ಸಿನಿಮಾದಲ್ಲೂ ಇಂತಹ ಘಟನೆಗಳನ್ನು ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)