ಆಕಾಶಕ್ಕೆ ಹಾರಿಸಿದ ಸಮೋಸ ಫ್ರಾನ್ಸ್​ಗೆ ತಲುಪಿತು!; ವಿಚಿತ್ರ ಪ್ರಯತ್ನ ನಡೆಸಿದ 'ಚಾಯ್​ ವಾಲಾ'

Untitled-1
Published on

ನವದೆಹಲಿ: ಒಮ್ಮೊಮ್ಮೆ ಏನೋ ಮಾಡಲು ಹೋಗಿ ಇನ್ನೇನೋ ಆಗುತ್ತದೆ. ತಮಾಷೆಗೆ ಹೇಳಿದ್ದ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡರೆ ಇಂಥದ್ದೇನೋ ಆಗಿಬಿಡುತ್ತದೆ. ಹಾಗೆಯೇ ಇಲ್ಲೊಬ್ಬರು ಹೊಟೇಲ್ ಮಾಲೀಕರು ಆಕಾಶಕ್ಕೆ ಹಾರಿಸಿದ ಸಮೋಸ ಫ್ರಾನ್ಸ್​ಗೆ ತಲುಪಿದೆ.

ಯುಕೆಯ ಬಾತ್ ಎಂಬಲ್ಲಿರುವ ಇಂಡಿಯನ್ ರೆಸ್ಟೋರೆಂಟ್​ ಚಾಯ್​ವಾಲಾದವರ ಈ ಪ್ರಯತ್ನ ಇದೀಗ ಹಲವರ ಗಮನ ಸೆಳೆದಿದ್ದು, ಆ ಪ್ರದೇಶದಲ್ಲಿ ಟಾಕ್​ ಆಫ್​ ದ ಟೌನ್​ ಆಗಿದೆ. ಎರಡು ಸಲ ಈ ಥರದ ಪ್ರಯತ್ನ ಮಾಡಿದ್ದ ಚಾಯ್ ವಾಲಾ, ಮೂರನೇ ಪ್ರಯತ್ನದಲ್ಲಿ ಆಕಾಶಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದರೂ, ಸಮೋಸ ಫ್ರಾನ್ಸ್​ಗೆ ತಲುಪಿದೆ.

ಚಾಯ್​ ವಾಲಾ ಮಾಲೀಕ ನೀರಜ್​ ಗಧೇರ್, ಆಕಾಶಕ್ಕೆ ಸಮೋಸ ಕಳಿಸುವುದಾಗಿ ಗೆಳೆಯರ ಬಳಿ ಒಮ್ಮೆ ತಮಾಷೆಗೆ ಹೇಳಿದ್ದರು. ಅದರಂತೆ ಇತ್ತೀಚೆಗೆ ಸಮೋಸ ಪ್ಯಾಕ್ ಮಾಡಿ ಹೀಲಿಯಂ ಬಲೂನ್ ಮೂಲಕ ಆಕಾಶಕ್ಕೆ ಕಳಿಸಲು ಪ್ರಯತ್ನಿಸಿದ್ದರು. ಮೊದಲ ಸಲ ಬಲೂನ್​ ಕೈತಪ್ಪಿದರೆ, ಎರಡನೇ ಸಲ ಬಲೂನ್​ನಲ್ಲಿ ಹೀಲಿಯಂ ಕೊರತೆ ಆಗಿ ತೊಂದರೆ ಆಗಿತ್ತು. ಮೂರನೇ ಸಲ ಅವರು ಸಮೋಸ ಮೇಲಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದರು. ಒಮ್ಮೆ ತಮಾಷೆಗೆಂದು ಹೀಗೆ ಹೇಳಿದ್ದೆ. ಆದರೆ ಈಗ ಕೋವಿಡ್​ನಂತಹ ಈ ಸಮಯದಲ್ಲಿ ನಮ್ಮ ಸುತ್ತಲಿನ ವಾತಾವರಣದಲ್ಲಿ ಒಂದು ಉಲ್ಲಾಸ ಮೂಡಿಸಲು ಈ ಪ್ರಯತ್ನ ಉಪಯುಕ್ತ ಎಂದೆನಿಸಿ ಮಾಡಿದೆ ಎಂದು ನೀರಜ್ ಹೇಳಿಕೊಂಡಿದ್ದಾರೆ.

ನೀರಜ್​ ಈ ಪ್ರಕ್ರಿಯೆಯನ್ನು ವಿಡಿಯೋ ಮಾಡಿಕೊಂಡಿದ್ದು, ಅದನ್ನು ತಮ್ಮ ಸಂಸ್ಥೆಯ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಹೀಲಿಯಂ ಬಲೂನ್​ನ ಜಾಡು ತಿಳಿಯಲು ಅದರೊಂದಿಗೆ ಗೊಪ್ರೊ ಕ್ಯಾಮೆರಾ ಮತ್ತು ಜಿಪಿಎಸ ಟ್ಯ್ಯಾಕರ್ ಅಳವಡಿಸಿದ್ದರು. ಎತ್ತರಕ್ಕೆ ಹೋದ ಬಲೂನ್​ ನಂತರ ಸಂಪರ್ಕಕ್ಕೆ ನಿಲುಕಿಲ್ಲ. ಆದರೆ ಮಾರನೇ ದಿನ ಫ್ರಾನ್ಸ್​ನಲ್ಲಿ ಅದು ಲ್ಯಾಂಡ್​ ಆಗಿರುವುದು ಜಿಪಿಎಸ್ ಮತ್ತೆ ಸಂಪರ್ಕಕ್ಕೆ ಸಿಕ್ಕಿದ್ದರಿಂದ ತಿಳಿಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಹೀಗೆ ಬಾತ್​ನಿಂದ ಆಕಾಶಕ್ಕೆ ಹಾರಿಸಿದ್ದ ಸಮೋಸ ಸುಮಾರು 600 ಮೈಲಿ ದೂರದ ಫ್ರಾನ್ಸ್​ಗೆ ತಲುಪಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net