ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

Couple Feature
Published on

ಕೊಡಗು: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಇಲ್ಲಿ ಆಗಿದ್ದೇ ಬೇರೆ. ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆಂದು ಎದ್ದಿದ್ದ ಅಮ್ಮನಿಗೆ ಇದ್ದಕ್ಕಿದ್ದಂತೆ ದಿಗಿಲು ಉಂಟಾಗಿತ್ತು. ಏಕೆಂದರೆ ರಾತ್ರಿ ಮಲಗುವಾಗ ಇದ್ದ ಮಗ-ಸೊಸೆ ಅಲ್ಲಿ ಕಾಣಿಸಿರಲಿಲ್ಲ. ರಾತ್ರಿ ಸಾಧ್ಯವಾದಲ್ಲೆಲ್ಲ ಹುಡುಕಾಡಿದ ಅಮ್ಮನಿಗೆ ಬೆಳಗ್ಗೆ ದೊಡ್ಡ ಆಘಾತವೇ ಎದುರಾಗಿತ್ತು.

ಈ ದಂಪತಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಚಿಕ್ಕತ್ತೂರು ಗ್ರಾಮದ ನಿವಾಸಿಗಳು. ಸೊಸೆ ಶ್ರುತಿ ಮೂಲತಃ ಬೆಂಗಳೂರಿನವಳು, ನರ್ಸ್​ ಆಗಿದ್ದಳು, ಆತನಿಗೋ ಗಾರೆ ಕೆಲಸ. ಅವನ ಹೆಸರು ಶ್ರೀಧರ್. ಆತನ ಅಕ್ಕ, ಶ್ರುತಿಯನ್ನು ಕಂಡು ತಮ್ಮನಿಗೆ ತೋರಿಸಿದ್ದಾಗ ಪರಸ್ಪರ ಒಪ್ಪಿದ್ದರಿಂದ ಶ್ರೀಧರನ ದಾಂಪತ್ಯಕ್ಕೆ ಶ್ರುತಿ ಸೇರಿತ್ತು. ಒಂದೂವರೆ ವರ್ಷದ ಹಿಂದೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಅನ್ಯೋನ್ಯವಾಗಿಯೇ ಇದ್ದ ಶ್ರೀಧರ್-ಶ್ರುತಿ ದಂಪತಿಯ ಬಾಳಿನಲ್ಲಿ ಅನಾರೋಗ್ಯವೊಂದು ದಾಳಿ ಇಟ್ಟು, ಇಬ್ಬರ ನಡುವಿನ ಸಾಮರಸ್ಯವನ್ನೇ ಕದಡಿಸಿದೆ.

ಗರ್ಭಿಣಿಯಾಗಿದ್ದ ಶ್ರುತಿಯ ರಕ್ತ ಪರೀಕ್ಷೆ ಮಾಡಿಸಿದ್ದಾಗ ಕಾಯಿಲೆಯೊಂದು ಇರುವುದು ಗೊತ್ತಾಗಿದೆ. ಅದು ಇಬ್ಬರ ದಾಂಪತ್ಯವನ್ನೇ ಹಾಳುಗೆಡವಿದ್ದು, ಅದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಲು ಆರಂಭವಾಯಿತು. ಮಾತ್ರವಲ್ಲ, ಅದೇ ಕಾರಣಕ್ಕೆ ಶ್ರೀಧರ್ ಮದ್ಯವ್ಯಸನಿಯಾದ. ದಿನಾ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ. ಹೀಗಾಗಿ ಇಬ್ಬರೂ ಪ್ರತ್ಯೇಕವಾಗಿ ಮಲಗುತ್ತಿದ್ದರು.

ಶನಿವಾರ ರಾತ್ರಿ ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆಂದು ಎದ್ದಿದ್ದ ಶ್ರೀಧರ್ ಅಮ್ಮನಿಗೆ ಮಗ ಕಾಣಿಸಲಿಲ್ಲ. ಬಳಿಕ ಸೊಸೆಯ ಕೋಣೆಗೆ ಹೋಗಿ ನೋಡಿದ್ದಾಗ ಅಲ್ಲಿ ಸೊಸೆಯೂ ಇರಲಿಲ್ಲ. ಗಾಬರಿಗೊಂಡ ಆಕೆ ರಾತ್ರಿಯಿಡೀ ಅಲ್ಲಿ ಇಲ್ಲಿ ಹುಡುಕಾಡಿದ್ದರೂ ಇಬ್ಬರೂ ಪತ್ತೆಯಾಗಿರಲಿಲ್ಲ. ಬೆಳಗ್ಗೆ ಮನೆ ಹಿಂದಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಮಗ-ಸೊಸೆ ಇಬ್ಬರೂ ನೇಣು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಉಂಡು ಮಲಗಿದ್ದ ಈ ದಂಪತಿಯ ಜಗಳ ಆತ್ಮಹತ್ಯೆಯಲ್ಲಿ ಕೊನೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net