

ನವದೆಹಲಿ: ರಾಜಕೀಯದಲ್ಲಿ ಮೆರೆಯಬೇಕು ಎನ್ನುವುದು ಅನೇಕರ ಕನಸ್ಸಾಗಿರುತ್ತದೆ. ಅದಕ್ಕೆ ಜನಬೆಂಬಲ ಬೇಕು, ಜನಬೆಂಬಲ ಬೇಕೆಂದರೆ ಒಂದಿಷ್ಟು ಒಳ್ಳೆ ಕೆಲಸಗಳನ್ನು ಮಾಡಬೇಕು. ಅದೇ ದೃಷ್ಟಿಯಲ್ಲಿ ಕಳ್ಳನೊಬ್ಬ ಕದ್ದ ಹಣವನ್ನೇ ದಾನ ಮಾಡಿ, ಉಚಿತ ಶಿಬಿರಗಳನ್ನು ನಡೆಸಿ ರಾಜಕಾರಣಿಯಾಗಲು ಹೊರಟಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.
ದೆಹಲಿ ವಾಸಿ ಮೊಹಮ್ಮದ್ ಇರ್ಫಾನ್ ರಾಜಕೀಯದ ಕನಸು ಕಂಡ ವ್ಯಕ್ತಿ. ಈತ ಬಿಹಾರ ಮೂಲದವನಾಗಿದ್ದು, ಅಲ್ಲಿನ ಜಿಲ್ಲಾ ಪರಿಷತ್ ಚುನಾವಣೆಗೆ ನಿಲ್ಲಬೇಕೆಂದುಕೊಂಡಿದ್ದನಂತೆ. ಇದಕ್ಕೆಂದು ಆತ ಹಲವು ವರ್ಷಗಳ ಹಿಂದೆಯೇ ಕಳ್ಳತನ ಆರಂಭಿಸಿದ್ದಾನೆ. ದೆಹಲಿ, ಪಂಜಾಬ್ ಮತ್ತು ಹಲವೆಡೆ ಕಳ್ಳತನ ಮಾಡಿ, ಅದಕ್ಕೆಂದೇ ಒಂದು ಗ್ಯಾಂಗ್ ಅನ್ನೂ ಕಟ್ಟಿಕೊಂಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಬಾಗಿಲು ಒಡೆದು ಒಳಗೆ ಹೋಗಿ ಹಣ ಮತ್ತು ಚಿನ್ನಾಭರಣವನ್ನು ಕದ್ದು ಬರುತ್ತಿದ್ದನಂತೆ.
ಹೀಗೆ ಕದ್ದ ಹಣದಲ್ಲಿ ಹೀರೋ ಆಗುವ ಪ್ರಯತ್ನವನ್ನೂ ಆತ ಮಾಡಿದ್ದಾನೆ. ಉಚಿತ ಆರೋಗ್ಯ ಶಿಬಿರಗಳು, ಕಷ್ಟದಲ್ಲಿರುವವರಿಗೆ ದಾನ ಮಾಡಿ ಒಳ್ಳೆಯ ವ್ಯಕ್ತಿ ಎನಿಸಿಕೊಂಡಿದ್ದಾನೆ. ಅದೇ ಹಣದಲ್ಲಿ ಒಂದು ಜಾಗ್ವಾರ್ ಮತ್ತು ಎರಡು ನಿಸ್ಸಾನ್ ಕಾರುಗಳನ್ನು ಖರೀದಿಸಿಕೊಂಡು ಕಾರುಬಾರು ನಡೆಸಿದ್ದಾನೆ.
ಈ ರೀತಿ ನಡೆಯುತ್ತಿದ್ದ ಕಳ್ಳತನದಲ್ಲಿ ಇರ್ಫಾನ್ ಕೈವಾಡವಿರುವುದರ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಈತನನ್ನು ಜನವರಿ 7ರಂದು ಬಂಧಿಸಿದ್ದಾರೆ. ನಂತರ ಆತ ನಿಜವನ್ನು ಒಪ್ಪಿಕೊಂಡಿದ್ದಾನೆ. ಈತನಿಗೆ ಪಂಜಾಬ್ನಲ್ಲಿ ಸಾಥ್ ನೀಡುತ್ತಿದ್ದ ಇನ್ನಿಬ್ಬರು ಕಳ್ಳರನ್ನೂ ಬಂಧಿಸಲಾಗಿದೆ. ಅವರ ಬಳಿ ಇದ್ದ ಎರಡು ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)