

ಸಿಂಗಾಪುರ: ಭಾರತೀಯರ ಪಾಲಿಗೆ ಇದು ತಲೆ ತಗ್ಗಿಸುವ ವಿಷಯ, ಭಾರತ ಮೂಲದ 60ರ ಕಾಮಾಂಧನೊಬ್ಬ ಚಪಲ ತೀರಿಸಿಕೊಳ್ಳಲು ಸಿಂಗಪುರ ಮಹಿಳೆಗೆ ಸಂಭೋಗಕ್ಕೆ ಒತ್ತಾಯಿಸಿ ಹಲ್ಲೆ ಮಾಡಿ 4 ವರ್ಷ 3 ತಿಂಗಳು ಜೈಲು ಶಿಕ್ಷೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಆರೋಪಿ 60 ವರ್ಷದ ಕಣ್ಣನ್ ಸುಕುಮಾರನ್. ವೃತ್ತಿಯಿಂದ ಡೆಲಿವರಿ ಡ್ರೈವರ್. ಮಹಿಳೆ ಜಾಗಿಂಗ್ ಮಾಡುತ್ತಿರುವಾಗ ಆಕೆಗೆ ಕಿರುಕಳ ನೀಡಿದ್ದ.
ಈ ಘಟನೆ ಮೇ 12 ರಂದು ನಡೆದಿದ್ದು, ಮಂಗಳವಾರ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಘಟನೆ ನಡೆದ ದಿನ ಮಹಿಳೆ ಏಕಾಂಗಿಯಾಗಿ ಜಾಗಿಂಗ್ ಮಾಡುತ್ತಿದ್ದಳು. ರಾತ್ರಿ 7.30 ರ ಸುಮಾರಿಗೆ ಕಣ್ಣನ್ ತನ್ನ ವ್ಯಾನ್ ಒಳಗೆ ಅಶ್ಲೀಲ ವಿಡಿಯೋ ನೋಡುತ್ತಿದ್ದ, ಆಗ ಆ ಮಹಿಳೆಯನ್ನು ಗಮನಿಸಿದ.
ಮೊದಲೇ ಅಶ್ಲೀಲ ಚಿತ್ರ ನೋಡುತ್ತಿದ್ದ ಆತ ಆ ಮಹಿಳೆಯನ್ನು ನೋಡಿ ಮತ್ತಷ್ಟು ಪ್ರಚೋದಿಸಲ್ಪಟ್ಟನು, ಮತ್ತು ಅವನು ಅವಳನ್ನು ಮಾತನಾಡಿಸಲು ಮುಂದಾದ" ಎಂದು ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೊರ್ ಝೆನ್ ಹಾಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆರೋಪಿ ಹಿಂದಿನಿಂದ ಬಂದು ಆಕೆಯನ್ನು ಬಳಸಿ ಪಕ್ಕದ ಪೊದೆಗಳ ಕಡೆಗೆ ತಳ್ಳುವ ಪ್ರಯತ್ನ ಮಾಡಿದ.
ಮಹಿಳೆ ಇದಕ್ಕೆ ಪ್ರತಿರೋಧವ್ಯಕ್ತಪಡಿಸಿದರೂ ಆತ ಬಿಡಲಿಲ್ಲ. ಆಕೆಯ ಎದೆಗೆ ಗುದ್ದಿದ. ಆಕೆ ಬಿದ್ದು, ಗಾಯಗೊಂಡಳು. ಆಗ ಆರೋಪಿ ಆಕೆಗೆ ಲೈಂಗಿಕ ಸುಖ ನೀಡುವಂತೆ ಒತ್ತಾಯಿಸಿದ್ದ. ಇದರಿಂದ ಆಘಾತಕ್ಕೊಳಗಾದ ಮಹಿಳೆ ಆತನನ್ನು ಒದ್ದು ಜೋರಾಗಿ ಕೂಗಿದಳು.
ಸಮೀಪದಲ್ಲಿದ್ದ ಮತ್ತೊಬ್ಬ ಮಹಿಳೆ ಆಕೆಯ ರಕ್ಷಣೆಗೆ ಧಾವಿಸಿದಳು. ಇದರಿಂದ ತನಗೆ ಅನಾಹುತ ಕಾದಿದೆ ಎಂದು ಅರಿತ ಕಣ್ಣನ್, ತನ್ನ ವಾಹನ ಹತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಆತನ ವ್ಯಾನ್‌ನ ನೋಂದಣಿ ಸಂಖ್ಯೆಯನ್ನು ಬರೆದು ಪೊಲೀಸರನ್ನು ಸಂಪರ್ಕಿಸಿದಳು. ಪೊಲೀಸರು ಆತನನ್ನು ಬಂಧಿಸಿದ್ದಾರೆ.