

ಮನೆ ಕೆಲಸದಾಕೆ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಭಾರತೀಯ ದಂಪತಿಗೆ 21 ತಿಂಗಳು ಜೈಲು ಹಾಗೂ 12.57 ಲಕ್ಷ ರೂ ದಂಡ ವಿಧಿಸಿ ಸಿಂಗಾಪೂರ್ ಕೋರ್ಟ್ ಆದೇಶ ನೀಡಿದೆ.
ಸಿಂಗಾಪೂರ್ನಲ್ಲಿ ನೆಲೆಸಿರುವ ಮೊಹಮ್ಮದ್ ತಸ್ಲೀನ್ ಹಾಗೂ ಫರ್ಹಾ ತೇಹ್ಸಿನ್ ದಂಪತಿ ಶಿಕ್ಷೆಗೊಳಗಾದವರು. 2016ರಲ್ಲಿ ಭಾರತದಿಂದ ಅಮನ್ದೀಪ್ ಕೌರ್ ಎಂ ಮಹಿಳೆಯನ್ನು ಕೆಲಸಕ್ಕೆಂದು ಕರೆಯಿಸಿಕೊಂಡಿದ್ದರು. ಆಗಿನಿಂದಲೂ ಆಕೆ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಫರ್ಹಾಗೆ 21 ತಿಂಗಳ ಜೈಲು ಹಾಗೂ 4.37 ಲಕ್ಷ ರೂ. ದಂಡ, ಪತಿ ಮೊಹಮ್ಮದ್ಗೆ 4 ತಿಂಗಳ ಜೈಲು ಮತ್ತು 8.20 ಲಕ್ಷ ರೂ. ದಂಡ ವಿಧಿಸಿದೆ. ಹಲ್ಲೆ ನಡೆಸಿದ್ದಲ್ಲದೆ, ತಮ್ಮ ಕುಕೃಯ್ತಗಳನ್ನು ಮುಚ್ಚಿಡಲು ಆಕೆಗೆ ಹಣದ ಆಮಿಷವೊಡ್ಡಿ ಸುಳ್ಳು ಹೇಳುವಂತೆ ತಿಳಿಸಿದ್ದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ದಂಪತಿ ನೀಡುತ್ತಿದ್ದ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮನೆಯ ಕಿಟಕಿಯಾಚೆ ನೇತಾಡುತ್ತಿದ್ದುದನ್ನು ಗಮನಿಸಿದ ಇನ್ನೊಬ್ಬ ಭಾರತೀಯ ಆಕೆಯನ್ನು ರಕ್ಷಿಸಿದ್ದ. ಬಳಿಕ ಆಕೆಯನ್ನು ಮಹಿಳಾ ಪುನರ್ವಸತಿ ಶಿಬಿರದಲ್ಲಿ ಇಡಲಾಗಿತ್ತು.
ಕೌರ್ಗೆ ಹೊಡಿದಿದ್ದಲ್ಲದೇ, ಬಡಿಗೆಯಿಂದಲೂ ಥಳಿಸಿದ್ದರು. ಆಕೆಯ ಮೇಲೆ ಹಲ್ಲೆ ನಡೆಸಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಬಯಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಪತಿ ಆಕೆಗೆ 3 ಲಕ್ಷ ರೂ. ( 5,500 ಸಿಂಗಾಪೂರ್ ಡಾಲರ್) ಪರಿಹಾರ ನೀಡುವಂತೆ ಆದೇಶಿಸಿದೆ.