

ನವದೆಹಲಿ: ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾದ ಸಂಸದರ ತಂಡ ಜು. 29 ಮತ್ತು 30ರಂದು ಮಣಿಪುರಕ್ಕೆ ಭೇಟಿ ನೀಡಲಿದೆ. 20ಕ್ಕೂ ಹೆಚ್ಚು ಸಂಸದರು ನಿಯೋಗದಲ್ಲಿ ಇರಲಿದ್ದಾರೆ. ಮಣಿಪುರ ಪರಿಸ್ಥಿತಿಯ ಬಗ್ಗೆ ಈ ತಂಡ ಅವಲೋಕನ ನಡೆಸಲಿದೆ ಎಂದು ಲೋಕಸಭೆಯ ಕಾಂಗ್ರೆಸ್ ವಿಪ್ ಮಾಣಿಕಂ ಟ್ಯಾಗೋರ್ ತಿಳಿಸಿದ್ದಾರೆ. ನಿಯೋಗವು ಮಣಿಪುರದ ಕಣಿವೆ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡಲಿದೆ. ಅಲ್ಲಿನ ವಿವಿಧ ಸಮುದಾಯಗಳನ್ನು ಭೇಟಿ ಮಾಡಲಿದೆ. ಕೆಲವು ಪರಿಹಾರ ಶಿಬಿರಗಳಿಗೂ ಭೇಟಿ ನೀಡಲಿದೆ ಎಂದು ಅವರು ತಿಳಿಸಿದರು.
ಮಣಿಪುರದಲ್ಲಿ ಹಿಂಸಾಚಾರಕ್ಕೆ ಪ್ರಧಾನಿ ಮೋದಿ ಅವರ ಉತ್ತರ ಬಯಸಿ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿರುವ ಕಾರಣ ಸಂಸತ್ನ ಉಭಯ ಸದನಗಳ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡ ಲಾಯಿತು. ಸದನದಲ್ಲಿ ಪ್ರಧಾನಿ ಉಪಸ್ಥಿತಿಗೆ ಆಗ್ರಹಿಸಿ ಪ್ರತಿಪಕ್ಷದ ಸದಸ್ಯರು ಘೊಷಣೆಗಳನ್ನು ಕೂಗುತ್ತಾ ಫಲಕಗಳನ್ನು ಪ್ರದರ್ಶಿಸಿದರು. ಈ ಗದ್ದಲದ ನಡುವೆಯೇ ಎರಡು ಮಸೂದೆಗಳನ್ನು ಅಂಗೀಕರಿಸಲಾಯಿತು. ಮಧ್ಯಾಹ್ನ ಸದನ ಆರಂಭವಾದಾಗ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಿದೇಶಿ ವ್ಯವಹಾರಗಳ ಕುರಿತು ಹೇಳಿಕೆ ನೀಡಲು ಆರಂಭಿಸಿದರು. ಆಗ ಪ್ರತಿಪಕ್ಷಗಳು ಅಡ್ಡಿಪಡಿಸಿದವು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಡುವೆ ವಾಗ್ವಾದ ನಡೆಯಿತು.
ಮಣಿಪುರ ಹಿಂಸಾಚಾರದ ಕುರಿತು ವಿರೋಧ ಪಕ್ಷದ ಸದಸ್ಯರು ನಿರಂತರವಾಗಿ ಘೊಷಣೆಗಳನ್ನು ಕೂಗುತ್ತಲೇ ಇದ್ದರು. ಕಾಂಗ್ರೆಸ್ ಸದಸ್ಯರು ಕಾಗದಗಳನ್ನು ಹರಿದು ಸಭಾಧ್ಯಕ್ಷರ ಕುರ್ಚಿಯತ್ತ ಎಸೆದರು. ಪ್ರತಿಪಕ್ಷದ ಸಂಸದರ ಈ ವರ್ತನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸಭಾಧ್ಯಕ್ಷರನ್ನು ಒತ್ತಾಯಿಸಿದರು. ಜನಾಂಗೀಯ ಕಲಹ ಪೀಡಿತ ಮಣಿಪುರದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮುಂದುವರಿಸಿದರು. ಗದ್ದಲ ಕಾರಣ ಕಲಾಪ ಮುಂದೂಡಲಾಯಿತು.
ಲೈಂಗಿಕ ದೌರ್ಜನ್ಯ ಮತ್ತು ಹಿಂಸಾಚಾರಗಳ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಲು ಕೋರಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಪೀಠದಲ್ಲಿ ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಬೇಕೆಂದು ನ್ಯಾಯಪೀಠವೊಂದು ಅರ್ಜಿದಾರರಿಗೆ ಸಲಹೆ ಮಾಡಿದೆ. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಸುಧಾಂಶು ಧುಲಿಯಾ ನೇತೃತ್ವದ ಪೀಠದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಗುರುವಾರ ಸಿಜೆಐ ಡಿ.ವೈ ಚಂದ್ರಚೂಡ್ ಯಾವುದೇ ಕೋರ್ಟ್ ಕಲಾಪ ಕೈಗೊಂಡಿರಲಿಲ್ಲ.
ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಪಕ್ಷಗಳು ಮೈತ್ರಿಯ ಹೆಸರನ್ನು ‘ಇಂಡಿಯಾ’ ಎಂದು ಕರೆದುಕೊಳ್ಳುತ್ತಿವೆ. ಆದರೆ ಅವರು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಕೇಳಲು ಸಿದ್ಧರಿಲ್ಲ. ಇದು ಯಾವ ರೀತಿಯ ಇಂಡಿಯಾ? ಪ್ರತಿಪಕ್ಷಗಳು ಪಕ್ಷಪಾತ ರಾಜಕಾರಣಕ್ಕೆ ಆದ್ಯತೆ ನೀಡಿರುವುದು ಅತ್ಯಂತ ದುರದೃಷ್ಟಕರ ಎಂದರು.
ಮಣಿಪುರದಲ್ಲಿ ನಡೆದ ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಘಟನೆಯನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿ ಹೇಳಿದ್ದಾರೆ.