

ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಮಾತ್ರವಲ್ಲದೆ ಇನ್ನೂ ಕೆಲ ಪಂದ್ಯಗಳ ವೇಳಾಪಟ್ಟಿಯೂ ಬದಲಾವಣೆ ಕಾಣಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಗುರುವಾರ ತಿಳಿಸಿದ್ದಾರೆ.
ಪಂದ್ಯಗಳ ನಡುವಿನ ಅಂತರದ ಬಗ್ಗೆ ಆಕ್ಷೇಪವೆತ್ತಿ ಕೆಲ 3 ದೇಶಗಳ ಕ್ರಿಕೆಟ್ ಮಂಡಳಿಗಳು ಐಸಿಸಿಗೆ ಪತ್ರ ಬರೆದಿವೆ. ಈ ಹಿನ್ನೆಲೆಯಲ್ಲಿ ಕೆಲ ಪಂದ್ಯಗಳ ದಿನಾಂಕ ಮತ್ತು ಸಮಯ ಬದಲಾವಣೆ ಮಾಡಲಾಗುವುದು. ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಕೆಲ ತಂಡಗಳ ಪಂದ್ಯಗಳ ನಡುವೆ 6 ದಿನಗಳ ಅಂತರವಿದ್ದರೆ, 4-5 ದಿನಗಳಿಗೆ ತಗ್ಗಿಸಲಾಗುವುದು. 3-4 ದಿನಗಳಲ್ಲಿ ಈ ಬದಲಾವಣೆಯನ್ನು ಅಂತಿಮಗೊಳಿಸಲಾಗುವುದು ಎಂದು ಜಯ್ ಷಾ ವಿವರಿಸಿದ್ದಾರೆ. ಆದರೆ ಯಾವ ದೇಶದ ಕ್ರಿಕೆಟ್ ಮಂಡಳಿಗಳೆಲ್ಲ ಪಂದ್ಯಗಳ ದಿನಾಂಕ ಬದಲಾವಣೆಗೆ ಬೇಡಿಕೆ ಇಟ್ಟಿವೆ ಎಂಬುದನ್ನು ಜಯ್ ಷಾ ಬಹಿರಂಗಪಡಿಸಿಲ್ಲ.
ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಭಾರತ-ಪಾಕ್ ಪಂದ್ಯ ಅ.15ರ ಬದಲಾಗಿ 14ರಂದು ನಡೆಯುವ ಸಾಧ್ಯತೆಗಳಿವೆ ಎಂದು ಈಗಾಗಲೆ ವರದಿಯಾಗಿತ್ತು. ವಿಶ್ವಕಪ್ ವೇಳಾಪಟ್ಟಿ ಬದಲಾವಣೆ ಅಂತಿಮಗೊಳಿಸುವ ಮುನ್ನ ಐಸಿಸಿ ಒಪ್ಪಿಗೆಯನ್ನೂ ಪಡೆಯಲಾಗುವುದು ಎಂದು ಜಯ್ ಷಾ ಸ್ಪಷ್ಟಪಡಿಸಿದ್ದಾರೆ.