

PM Modi : ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 29, ಶುಕ್ರವಾರದಂದು ಜಪಾನ್ಗೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಬಂದಿಳಿದಿದ್ದು, ಅಲ್ಲಿನ ಭಾರತೀಯ ವಲಸಿಗರು ಅವರನ್ನು ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ.
2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಮೋದಿಯವರ 8 ನೇ ಜಪಾನ್ ಭೇಟಿಯಾಗಿದೆ. ಈ ಭೇಟಿಯು ಭಾರತ ಹಾಗೂ ಜಪಾನ್ ವಾರ್ಷಿಕ ಶೃಂಗ ಸಭೆಯಾಗಿದ್ದು, ಇಲ್ಲಿ ಜಪಾನಿನ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಪ್ರಧಾನಿ ಮೋದಿಯವರು ಉನ್ನತ ಮಟ್ಟದ ಚರ್ಚೆ ನಡೆಸಲಿದ್ದು, ಈ ವೇಳೆ ಶುದ್ಧ ಇಂಧನ, ಅರೆವಾಹಕಗಳು, ಸ್ಟಾರ್ಟ್ಅಪ್ಸ್ಗಳು ಮತ್ತು ಪೂರೈಕೆ ಸರಪಳಿ ಬಗ್ಗೆ ಹೆಚ್ಚು ಗಂಭೀರ ಮಾತುಕತೆ ನಡೆಸುವ ಸಾಧ್ಯತೆ ಇದೆ.
ನರೇಂದ್ರ ಮೋದಿಯವರು ಆಗಮಿಸಿದ ಕೆಲವು ಸಮಯದ ನಂತರ, ಭಾರತೀಯ ಸಮುದಾಯದ ಸದಸ್ಯರು ರಾಷ್ಟ್ರಧ್ವಜವನ್ನು ಹಿಡಿದು ಘೋಷಣೆಗಳನ್ನು ಕೂಗುವ ಮೂಲಕ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಇನ್ನು ಇವರಿಗೆ ಕೃತಜ್ಞತೆ ವ್ಯಕ್ತಪಡಿಸಿದ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಟೋಕಿಯೋದಲ್ಲಿರುವ ಭಾರತೀಯರ ಪ್ರೀತಿಗೆ ನಾಣು ಸೋತುಹೋಗಿದ್ದೇನೆ. ಜಪಾನಿನ ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವುದರೊಂದಿಗೆ ನಮ್ಮ ಸಾಂಸ್ಕೃತಿಕ ಬೇರುಗಳನ್ನು ರಕ್ಷಿಸುವುದು ನಿಜವಾಗಿಯೂ ಶ್ಲಾಘನೀಯ ಎಂದು ಬರೆದುಕೊಂಡಿದ್ದಾರೆ.
ಮೋದಿಯವರಿಗಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಪಾನಿನ ಪ್ರಜೆಗಳು ಭಾರತೀಯ ನೃತ್ಯ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಇವರ ಮುಂದೆ ಪ್ರದರ್ಶನ ನೀಡಿದ ಕಲಾವಿದೆಯೊಬ್ಬರು ವಿಶ್ವದ ಅತ್ಯಂತ ಪ್ರಮುಖ ನಾಯಕನ ಮುಂದೆ ಪ್ರದರ್ಶನ ನೀಡುವುದು ಪದಗಳಿಗೆ ಮೀರಿದ ಅನಭವ. ಈ ದಿನ ನನ್ನ ಜೀವನದ ಅತ್ಯಂತ ಸ್ಮರಣೀಯ ದಿನ ಎಂದು ಹೇಳಿದ್ದಾರೆ.
ಜಪಾನ್ ಮತ್ತು ಭಾರತದ ನಡುವೆ 15 ನೇ ಶೃಂಗಸಭೆಯಾಗಿದ್ದು, ಈ ಸಂದರ್ಭದಲ್ಲಿ ಮೋದಿ ಹಾಗೂ ಇಶಿಬಾ ಅವರು ಕಾರ್ಯತಂತ್ರದ ಕುರಿತು ಚರ್ಚೆ ನಡೆಸುವ ನಿರೀಕ್ಷೆ ಇದೆ. ಇನ್ನು ನಾನಿಂದು ಟೋಕಿಯೋದಲ್ಲಿ ಬಂದಿಳಿದಿದ್ದೇನೆ ಇಶಿಬಾರವರೊಂದಿಗೆ ಅಸ್ತಿತ್ವದಲ್ಲಿರುವ ಪಾಲುದಾರಿಕೆಗಳನ್ನು ಗಾಢವಾಗಿಸಲು ಹಾಗೂ ಸಹಯೋಗದ ಹೊಸ ಮಾರ್ಗಗಳನ್ನು ಅನ್ವೇಷಿಸಲು ನಾನು ಎದುರುನೋಡುತ್ತಿದ್ದೇನೆ ಎಂದು ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಜಪಾನಿನ ಭೇಟಿ ನಂತರ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಭಾಗವಹಿಸಿ, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಮುಖವಾದ ಸಭೆ ನಡೆಸುವ ನಿರೀಕ್ಷೆಯಲ್ಲಿದ್ದಾರೆ. (ಏಜೆನ್ಸೀಸ್)