

Cloudburst : ಉತ್ತರಾಖಂಡದ ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಮೇಘಸ್ಫೋಟ ಸಂಭವಿಸಿದ್ದು, ಹಲವಾರು ಕುಟುಂಬಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ ಮತ್ತು ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮೇಘಸ್ಫೋಟದ ನಂತರ ಭಗ್ನಾವಶೇಶಗಳ ಮಧ್ಯೆ ಹಲವಾರು ಮಂದಿ ಸಿಲುಕಿಕೊಂಡಿದ್ದಾರೆ ಎಂದರು. ಅಲ್ಲದೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಕಳೆದ ವಾರವಷ್ಟೇ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿ, ಮನೆಗಳು ಮತ್ತು ಕಟ್ಟಡಗಳ ಮೇಲೆ ಅವಶೇಷಗಳು ಹರಿದಾಡಿದವು. ಥರಾಲಿ ಮಾರುಕಟ್ಟೆ ಪ್ರದೇಶ ಮತ್ತು ಥರಾಲಿ ತಹಸಿಲ್ ಸಂಕೀರ್ಣವು ಭಗ್ನಾವಶೇಷಗಳಿಂದ ತುಂಬಿತ್ತು. ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅವರ ಅಧಿಕೃತ ನಿವಾಸ, ಅಂಗಡಿಗಳು ಮತ್ತು ವಾಹನಗಳು ಸೇರಿದಂತೆ ಅನೇಕ ವಸತಿ ಪ್ರದೇಶಗಳು ಸಹ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದವು. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗಿದವು. ವಿಶೇಷವಾಗಿ ಚಂಬಾ ಜಿಲ್ಲೆಯಲ್ಲಿ, ಈ ವಾರದ ಆರಂಭದಲ್ಲಿ ಮಣಿಮಹೇಶ್ ಯಾತ್ರೆ ಕೈಗೊಂಡಿದ್ದ 7,000-8,000 ಯಾತ್ರಿಕರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳು ಈ ಋತುವಿನಲ್ಲಿ ನಿರಂತರವಾಗಿ ಭಾರಿ ಮಳೆಯನ್ನು ಎದುರಿಸುತ್ತಿದೆ. ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳಿಗೆ ಈ ಪ್ರದೇಶಗಳು ಸಾಕ್ಷಿಯಾಗುತ್ತಿವೆ.
ಭಾರೀ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಆಗಸ್ಟ್ 30 ರವರೆಗೆ ಜಮ್ಮು ಪ್ರದೇಶದ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ.
ಇನ್ನು ಹಿಮಾಚಲ ಪ್ರದೇಶದಲ್ಲಿ ಗುರುವಾರ ಸಂಜೆಯ ವೇಳೆಗೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 524 ರಸ್ತೆಗಳು ಸಂಚಾರಕ್ಕೆ ಅಡ್ಡಿಯಾಗಿವೆ. 1,230 ವಿದ್ಯುತ್ ವಿತರಣಾ ಪರಿವರ್ತಕಗಳು ಅಸ್ತವ್ಯಸ್ತಗೊಂಡಿವೆ ಮತ್ತು 416 ನೀರು ಸರಬರಾಜು ಯೋಜನೆಗಳಿಗೆ ಅಡ್ಡಿಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ತಿಳಿಸಿದೆ.
ಇದೇ ಸಂದರ್ಭದಲ್ಲಿ, ಜಮ್ಮು, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲಿನ ನಾಗರಿಕ ಆಡಳಿತದ ಮನವಿ ಮೇರೆಗೆ, ಆಹಾರ ವಂಚಿತ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಮತ್ತು ವೈದ್ಯಕೀಯ ನೆರವು ಮತ್ತು ಆಹಾರವನ್ನು ಒದಗಿಸಲು 12 ಹೆಲಿಕಾಪ್ಟರ್‌ಗಳನ್ನು ಒಳಗೊಂಡ ವ್ಯಾಪಕ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಗಳನ್ನು ಪ್ರಾರಂಭಿಸುವುದಾಗಿ ಭಾರತೀಯ ಸೇನೆ ಗುರುವಾರ ಘೋಷಿಸಿದೆ. (ಏಜೆನ್ಸೀಸ್)