

ನವದೆಹಲಿ: ಗಾಲ್ವಾನ್ ಪ್ರದೇಶದಲ್ಲಿ ನಡೆದಿದ್ದ ಘರ್ಷಣೆ ಬೆನ್ನಲ್ಲೇ ತೀವ್ರ ಹದಗೆಟ್ಟಿದ್ದ ಭಾರತ ಮತ್ತು ಚೀನಾ ನಡುವಿನ ಸಂಬಂಧ ಈಗ ಮತ್ತೆ ಸುಧಾರಿಸುವ ಲಕ್ಷಣ ಕಂಡು ಬರುತ್ತಿದೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗದ ವೇಳೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಜತೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ ನಡೆಸಿದ್ದು, ಈ ವೇಳೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಗಡಿಯಲ್ಲಿ ಶಾಂತಿ, ಪರಸ್ಪರ ನಂಬಿಕೆ ಮತ್ತು ಗೌರವದಿಂದ ಮಾತ್ರ ಎರಡೂ ದೇಶಗಳ ನಡುವೆ ಸ್ನೇಹ ಮುಂದುವರಿಯಲು ಸಾಧ್ಯ ಎಂದು ಜಿನ್ಪಿಂಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದನ್ನು ಜಿನ್ಪಿಂಗ್ ಕೂಡ ಸ್ವಾಗತಿಸಿದ್ದು, ಬಿಕ್ಕಟ್ಟು ಬಗೆಹರಿಸುವಲ್ಲಿ ಈ ಮಾತುಕತೆ ಮಹತ್ವದ ಮುನ್ನಡೆಯಾಗಿದೆ.
ಹಿಮಾಲಯ ವಲಯದ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ ಮಿಲಿಟರಿ ಪಡೆಗಳ ‘ಸಂಪೂರ್ಣ ವಾಪಸಾತಿ’ಗೆ ಅನುಕೂಲವಾಗುವಂತೆ ಗಡಿಯಲ್ಲಿ ಗಸ್ತು ವ್ಯವಸ್ಥೆ ಪುನರಾರಂಭ ಮಾಡುವ ಕುರಿತು ಇತ್ತೀಚೆಗೆ ಪ್ರಕಟಿಸಲಾದ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಜಿನ್ಪಿಂಗ್ ಸ್ವಾಗತಿಸಿದ್ದಾರೆ. ಉಭಯ ದೇಶಗಳ ಗಡಿಗಳಲ್ಲಿ 2020ರಲ್ಲಿ ಉದ್ಭವಿಸಿದ ಪರಿಸ್ಥಿತಿಯಿಂದ ಉಂಟಾದ ವಿವಾದಗಳನ್ನು ಬಗೆಹರಿಸಲೂ ಸಹಮತ ವ್ಯಕ್ತವಾಗಿದೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಭಾರತದ ರಾಷ್ಟಿŠೕಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಶೀಘ್ರವೇ ಸಭೆ ನಡೆಸಿ ಗಡಿಗೆ ಸಂಬಂಧಿಸಿ ಸೂಕ್ತ, ನ್ಯಾಯಸಮ್ಮತ ಹಾಗೂ ಪರಸ್ಪರ ಸ್ವೀಕಾರಾರ್ಹವಾದ ಪರಿಹಾರವನ್ನು ಕಂಡುಕೊಳ್ಳಲು ರ್ಚಚಿಸುವ ನಿರೀಕ್ಷೆ ಇದೆ.
ಪರಸ್ಪರ ವಿಶ್ವಾಸ, ಗೌರವಕ್ಕೆ ಆದ್ಯತೆ: ರಷ್ಯಾದ ಕಝåಾನ್ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೖಂಗಸಭೆ ವೇಳೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ ಮತ್ತು ಜಿನ್ಪಿಂಗ್, ಒಡಂಬಡಿಕೆ ಕುರಿತು ಸಂತೋಷ ವ್ಯಕ್ತಪಡಿಸಿದರು. 2019ರ ನಂತರ ಇದು ಉಭಯ ನೇತಾರರ ನಡುವಿನ ಮೊದಲ ದ್ವಿಪಕ್ಷೀಯ ಸಭೆಯಾಗಿದೆ. ‘ಪರಸ್ಪರ ವಿಶ್ವಾಸ, ಪರಸ್ಪರ ಗೌರವ ಮತ್ತು ಪರಸ್ಪರ ಸಂವೇದನಾಶೀಲತೆ ದ್ವಿಪಕ್ಷೀಯ ಬಾಂಧವ್ಯಗಳಿಗೆ ಮಾರ್ಗದರ್ಶಿ ಸೂತ್ರ ಆಗಲಿದೆ’ ಎಂದು ಸಭೆಯಲ್ಲಿ ಮೋದಿ ಹೇಳಿದರು. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಸೂಕ್ತವಾಗಿ ನಿಭಾಯಿಸುವುದು ಅಗತ್ಯವೆಂದು ಪ್ರತಿಪಾದಿಸಿದ ಮೋದಿ, ಅವುಗಳು ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡಲು ಅವಕಾಶ ಕೊಡಬಾರದು ಎಂದು ಹೇಳಿದರು. ‘ಭಾರತ-ಚೀನಾ ಸಂಬಂಧಗಳು ನಮ್ಮ ದೇಶಗಳ ಜನರು ಮಾತ್ರವಲ್ಲದೆ ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿ ಮತ್ತು ಸ್ಥಿರತೆಗೂ ಅಗತ್ಯ’ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನಿರ್ಣಾಯಕ ಪಾತ್ರ: ವಿವಾದವನ್ನು ಬಗೆಹರಿಸುವಲ್ಲಿ ಮತ್ತು ಗಡಿ ಭಾಗಗಳಲ್ಲಿ ಶಾಂತಿ ನೆಮ್ಮದಿ ನೆಲೆಸುವಂತಾಗುವಲ್ಲಿ ಭಾರತ-ಚೀನಾ ಗಡಿ ಪ್ರಶ್ನೆ ಕುರಿತ ವಿಶೇಷ ಪ್ರತಿನಿಧಿಗಳಿಗೆ (ಅಜಿತ್ ದೋವಲ್-ವಾಂಗ್ ಯೀ) ನಿರ್ಣಾಯಕ ಪಾತ್ರವಿದೆ ಎಂದು ಉಭಯ ನಾಯಕರು ಹೇಳಿದರೆಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ. ಆದಷ್ಟು ಬೇಗ ಭೇಟಿಯಾಗಿ ಪ್ರಯತ್ನಗಳನ್ನು ಮುಂದುವರಿಸಲು ವಿಶೇಷ ಪ್ರತಿನಿಧಿ ಗಳಿಗೆ ಇಬ್ಬರೂ ಮುಖಂಡರು ಸೂಚಿಸಿದ್ದಾರೆ.
ಸಂಪೂರ್ಣ ವಾಪಸಾತಿ?: ಲಡಾಖ್ನ ಗಾಲ್ವನ್ನಲ್ಲಿ ನಡೆದ ಘರ್ಷಣೆ ಸಹಿತ, 2020ರ ಮೇ ಪೂರ್ವದ ಪರಿಸ್ಥಿತಿ, ಅಂದರೆ ಘರ್ಷಣೆಗಳಿಗಿಂತ ಮುಂಚಿನ ಸ್ಥಿತಿಗೆ ಭಾರತ ಮತ್ತು ಚೀನಾದ ಮಿಲಿಟರಿ ಪಡೆಗಳನ್ನು ವಾಪಸ್ ಪಡೆದುಕೊಳ್ಳುವುದು ಮುಂದಿನ ಗುರಿಯಾಗಿದೆ. 2020ರ ಮೇ 5ರಂದು ಪ್ಯಾಂಗಾಂಗ್ ಸರೋವರ ಪ್ರದೇಶದ ಗಲ್ವಾನ್ ಕಣಿವೆಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಮೖತಪಟ್ಟಿದ್ದರು. ಎಲ್ಎಸಿಯನ್ನು ಉಲ್ಲಂಘಿಸುವ ಚೀನಾದ ಏಕಪಕ್ಷೀಯ ಕ್ರಮಗಳಿಂದಾಗಿ ಲಡಾಖ್ನಲ್ಲಿ ಉದ್ವಿಗ್ನತೆ ಸೖಷ್ಟಿಯಾಗಿತ್ತು. ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧ ಹಳಸಿತ್ತು.