ಭಾರತ-ಪಾಕ್​ ಉದ್ವಿಗ್ನ ಸ್ಥಿತಿ: ಪಾಕಿಸ್ತಾನದ 3 ವಾಯುನೆಲೆಗಳು ಸ್ಫೋಟ! ವೈರಿ ರಾಷ್ಟ್ರದ ಡ್ರೋನ್​ಗಳು ಭಸ್ಮ | Operation Sindoor

ವಿಜಯವಾಣಿ - 2025-05-10T070453.745
Published on

Operation Sindoor: ಪ್ರಸ್ತುತ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸಿದ್ದು, ಪಾಕಿಸ್ತಾನದ ಸೊಕ್ಕನ್ನು ಮುರಿಯುವಲ್ಲಿ ಭಾರತ ಹಂತ ಹಂತವಾಗಿ ಯಶಸ್ವಿಯಾಗಿದೆ. ಇಂದು (ಮೇ.10) ಮುಂಜಾನೆಯೇ ಪಾಕ್​ನ ಮೂರು ವಾಯುನೆಲೆಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಮತ್ತು ಭಾರತದ ಹಲವಾರು ಪ್ರದೇಶಗಳಲ್ಲಿ ಕಾಣಿಸಿಕೊಂಡ ವೈರಿ ರಾಷ್ಟ್ರದ ಡ್ರೋನ್​ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಪಾಕಿಸ್ತಾನದ ಕುತಂತ್ರ ದಾಳಿಯನ್ನು ಭಾರತ ಹತ್ತಿಕ್ಕುತ್ತಿದೆ. ಒಂದೊಂದು ದಾಳಿಗೂ ತಕ್ಕ ಉತ್ತರ ನೀಡುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದ ಪಾಕಿಸ್ತಾನಕ್ಕೆ ಸದ್ಯ ಭಾರೀ ಮುಖಭಂಗ ಉಂಟಾಗಿದ್ದು, ಭಾರತದ ಸಶಸ್ತ್ರ ಪಡೆ ವಿರುದ್ಧ ಹೋರಾಡಲು ಎಲ್ಲೂ ಹಂತದಲ್ಲಿಯೂ ವಿಫಲವಾಗಿದೆ. ಮೇ.8ರಿಂದ ಭಾರತದ ಮೇಲೆ ಡ್ರೋನ್‌ಗಳ ಮೂಲಕ ದಾಳಿ ಮಾಡುತ್ತಿರುವ ಪಾಕಿಸ್ತಾನ, ನಿನ್ನೆ ಮತ್ತೊಮ್ಮೆ ಭಾರತದ 11 ಪ್ರದೇಶಗಳನ್ನು ಡ್ರೋನ್‌ ಮೂಲಕ ದಾಳಿ ಮಾಡಲು ಪ್ರಯತ್ನಿಸಿತು. ಆದರೆ, ಇದೇ ಸಮಯದಲ್ಲಿ ಭಾರತೀಯ ಸೇನೆಯು ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡ ವೈರಿಗಳ ಡ್ರೋನ್‌ಗಳನ್ನು ಛಿದ್ರಗೊಳಿಸುವಲ್ಲಿ ಯಶಸ್ವಿಯಾಗಿದೆ.

ಜಮ್ಮು, ಸಾಂಬಾ, ಜೈಸಲ್ಮೇರ್, ಪಠಾಣ್‌ಕೋಟ್, ಪೂಂಚ್, ಫಿರೋಜ್‌ಪುರ, ಅಮೃತಸರ, ಪೋಖ್ರಾನ್ ಮತ್ತು ಉಧಂಪುರದಲ್ಲಿ ಪಾಕ್​ ಡ್ರೋನ್‌ಗಳ ಮೂಲಕ ದಾಳಿ ನಡೆಸಿತು. ಫಿರೋಜ್‌ಪುರದಲ್ಲಿ ನೇರವಾಗಿ ನಾಗರಿಕರನ್ನೇ ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋನ್ ದಾಳಿ ನಡೆಸಿತು. ಈ ದಾಳಿಯಲ್ಲಿ ಮೂವರು ಗಾಯಗೊಂಡಿದ್ದು, ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಆದಾಗ್ಯೂ, ಪಾಕಿಸ್ತಾನದ ದಾಳಿಯನ್ನು ಗ್ರಹಿಸಿದ ಭಾರತ ತನ್ನ ವಾಯು ರಕ್ಷಣಾ ವ್ಯವಸ್ಥೆಯಿಂದ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಸಫಲವಾಗಿದೆ.

ಇಂದು ಮುಂಜಾನೆ ಶ್ರೀನಗರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಎನ್​ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರೀ ಶಬ್ದಗಳು ಕೇಳಿಬಂದಿವೆ. ಈ ಕುರಿತು ಸ್ವತಃ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, ಜೋರು ಸದ್ದು ಕೇಳಿಬರುತ್ತಿವೆ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ, ಜಮ್ಮು-ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್ ಗಡಿಗಳಲ್ಲಿ ಹೈ ಅಲರ್ಟ್ ಮುಂದುವರೆದಿದ್ದು, ಸಾಂಬಾ, ಉರಿ ಮತ್ತು ಜೈಸಲ್ಮೇರ್‌ನಲ್ಲಿ ಬ್ಲ್ಯಾಕ್‌ಔಟ್ ಜಾರಿಗೊಳಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net