

ನವದೆಹಲಿ: ದೇಶವ್ಯಾಪಿ ಗರಿಷ್ಠ ತಾಪಮಾನದಲ್ಲಿನ ಹೆಚ್ಚಳವು ಕೊಯ್ಲುಗೆ ಸಿದ್ಧವಿರುವ ಗೋಧಿ ಬೆಳೆಯ ಮೇಲೆ ಭಾರೀ ಪರಿಣಾಮ ಬೀರಬಹುದು ಎಂದು ಅನೇಕ ರೈತರು ಕಂಗಲಾಗಿದ್ದಾರೆ. ಈ ಕುರಿತು ಹೊಸ ಮಾಹಿತಿ ಹಂಚಿಕೊಂಡ ಭಾರತೀಯ ಹವಾಮಾನ ಇಲಾಖೆ, ಬಿಸಿಲ ತಾಪಮಾನದ ಹೆಚ್ಚಳ ಬೆಳೆಯ ಮೇಲೆ ಪರಿಣಾಮ ಬೀರುತ್ತದೆಯೋ? ಇಲ್ಲವೋ? ಎಂಬುದನ್ನು ತಿಳಿಸಿದೆ.
ಏಪ್ರಿಲ್ನಿಂದ ಜೂನ್ ಅವಧಿಯಲ್ಲಿ ಭಾರತವು ತೀವ್ರ ತಾಪಮಾನ ಎದುರಿಸಲಿದ್ದು, ಮಧ್ಯ ಮತ್ತು ಪಶ್ಚಿಮ ಪೆನ್ಯೂನ್ಸಲಾರ್ ದ್ವೀಪ ಭಾಗಗಳು ಹೆಚ್ಚಿನ ಪರಿಣಾಮವನ್ನು ಎದುರಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶ ಹೊರತುಪಡಿಸಿ, ಗೋಧಿ ಉತ್ಪಾದಿಸುವ ರಾಜ್ಯಗಳಿಗೆ ಬಿಸಿಲ ಹೆಚ್ಚಳದಿಂದ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಮಧ್ಯಪ್ರದೇಶದಲ್ಲಿ ತಾಪಮಾನ 37-40 ಡಿಗ್ರಿ ಸೆಲ್ಸಿಯಸ್ ಇದ್ದು, ಮುಂದಿನ ವಾರ 42 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಶೇ.90 ರಷ್ಟು ಗೋಧಿ ಕಟಾವು ಮುಗಿದಿರುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ತಾಪಮಾನವು 35 ಡಿಗ್ರಿಗಿಂತ ಹೆಚ್ಚಿದ್ದರೂ, ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.
2022-23ರಲ್ಲಿ ಭಾರತವು 1,105.5 ಮಿಲಿಯನ್ ಟನ್ ಗೋಧಿಯನ್ನು ಉತ್ಪಾದಿಸಿದೆ. ಇದರಲ್ಲಿ ಉತ್ತರ ಪ್ರದೇಶ ಶೇ.30.40, ಮಧ್ಯಪ್ರದೇಶ ಶೇ.20.56, ಪಂಜಾಬ್ ಶೇ.15.18, ಹರಿಯಾಣ ಶೇ.9.89 ಮತ್ತು ರಾಜಸ್ಥಾನ ಶೇ.9.62 ರಷ್ಟಿದೆ. 2022ರಲ್ಲಿ ಏರಿಕೆಯಾದ ತಾಪಮಾನದಿಂದ ಭಾರತದಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿತ್ತು. ಇದರಿಂದ ವಿದೇಶಕ್ಕೆ ಗೋಧಿ ರಫ್ತು ಮಾಡುವುದು ತಾತ್ಕಾಲಿಕವಾಗಿ ನಿಷೇಧವಾಗಿತ್ತು.
ಸಾಮಾನ್ಯವಾಗಿ ಗೋಧಿ ಬೆಳೆಯನ್ನು ಅಕ್ಟೋಬರ್‌ನಲ್ಲಿ ಬಿತ್ತಿದರೆ ಹೆಚ್ಚಿನ ಭಾಗಗಳಲ್ಲಿ ಕೊಯ್ಲು ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತದೆ. ಮುಂದಿನ ವಾರದಲ್ಲಿ ದೇಶದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಕ್ರಮೇಣ 2-3 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಉತ್ತರ ಭಾರತ ಮತ್ತು ಪೂರ್ವ ಹಾಗೂ ಪಶ್ಚಿಮ ಕರಾವಳಿಯ ಹಲವು ಭಾಗಗಳಲ್ಲಿ ಸೇರಿದಂತೆ ದೇಶದ ಉಳಿದ ಭಾಗಗಳಲ್ಲಿ 2-3 ಡಿಗ್ರಿ ಸೆಲ್ಸಿಯಸ್ ತಾಪಮಾನವು ಎಂದಿಗಿಂತ ಹೆಚ್ಚಾಗಿರುತ್ತದೆ,(ಏಜೆನ್ಸೀಸ್).