ಕರಾವಳಿಯಲ್ಲಿ ಗೋವುಗಳ ಸಂಖ್ಯೆ ಕ್ಷೀಣ; ಮೇವಿನ ಕೊರತೆ, ನಿರ್ವಹಣಾ ವೆಚ್ಚ ಸಾಧ್ಯವಾಗದೆ ಮಾರಾಟ

cow
ಸಾಂದರ್ಭಿಕ ಚಿತ್ರ
Published on

ಪ್ರಕಾಶ್ ಮಂಜೇಶ್ವರ ಮಂಗಳೂರು

ಗೋವುಗಳ ಸಾಕಣೆ, ಸಂರಕ್ಷಣೆ ಬಗ್ಗೆ ಹೆಚ್ಚು ಜಾಗೃತಿ ಇರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೇ, ಇವುಗಳ ಸಂಖ್ಯೆ ವೇಗವಾಗಿ ಕ್ಷೀಣಿಸುತ್ತಿವೆ!
ಅಧಿಕೃತ ಅಂಕಿ ಅಂಶ ಪ್ರಕಾರ, ದಕ್ಷಿಣ ಕನ್ನಡದಲ್ಲಿ 2019ರಲ್ಲಿ 2,52,401 ಇದ್ದ ಗೋವುಗಳ ಸಂಖ್ಯೆ 2,35,00ಕ್ಕೆ ಇಳಿದಿದೆ. ಕಳೆದ ಒಂಬತ್ತು ತಿಂಗಳಲ್ಲೇ (ಮೇ ಬಳಿಕ) ದಕ್ಷಿಣ ಕನ್ನಡದಿಂದ ಹೊರಜಿಲ್ಲೆಗಳಿಗೆ 10 ಸಾವಿರಕ್ಕೂ ಅಧಿಕ ಗೋವುಗಳು ಮಾರಾಟ ಆಗಿವೆ.

ಪ್ರಸ್ತಾವಿತ ಅವಧಿಯಲ್ಲಿ ಜಿಲ್ಲೆಯಿಂದ ಹೊರಗೆ ದನ ಸಾಗಾಟಕ್ಕೆ ಅನುಮತಿ ಕೋರಿ 6,483 ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 5,577 ಅರ್ಜಿಗಳು ಸ್ವೀಕೃತವಾಗಿ, ಉಳಿದಿದ್ದು ತಿರಸ್ಕರಿಸಲ್ಪಟ್ಟಿವೆ. ತಲಾ ಒಂದು ಅರ್ಜಿಯಲ್ಲಿ ಎರಡು ದನಗಳು ಸಾಗಾಟ ಆಗುತ್ತವೆ. ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ದನಗಳು ಹಾಸನ, ಮೈಸೂರು, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಿಗೆ ಮಾರಾಟವಾಗುತ್ತಿದೆ.

ದನಗಳ ಕೊರತೆಯಿಂದ ಜಿಲ್ಲೆಯಲ್ಲಿ ಹಾಲಿನ ಕೊರತೆ ಉಂಟಾಗಿದೆ. ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಒಕ್ಕೂಟ ಪ್ರತಿದಿನ ಒಟ್ಟು 4.24 ಲಕ್ಷ ಲೀಟರ್ ಹಾಲು ಪೂರೈಸುತ್ತಿದೆ. ಇದರಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ 3.5 ಲಕ್ಷ ಲೀಟರ್‌ನಷ್ಟು ಹಾಲು ಮಾತ್ರ ಹೈನುಗಾರರಿಂದ ಪೂರೈಕೆಯಾಗುತ್ತಿದೆ. ದೈನಂದಿನ ಬಾಕಿ 1.60 ಲಕ್ಷ ಲೀಟರ್ ಹಾಲನ್ನು ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಂದ ತೆಗೆದುಕೊಳ್ಳಲಾಗುತ್ತಿದೆ.

  • ಮೇವು ಕೊರತೆ: ಕಳೆದ ಕೆಲವು ದಶಗಳಿಂದ ಜಿಲ್ಲೆಯಲ್ಲಿ ಭತ್ತದ ಗದ್ದೆಗಳು ಕಡಿಮೆಯಾಗುತ್ತಿದ್ದು, ಈ ಪ್ರದೇಶದಲ್ಲಿ ಅಡಕೆ, ರಬ್ಬರ್ ಮುಂತಾದ ವಾಣಿಜ್ಯ ಬೆಳೆಗಳು ಬೆಳೆಯುತ್ತಿವೆ. ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ನಷ್ಟು ಇದ್ದ ಭತ್ತದ ಗದ್ದೆಯ ವಿಸ್ತೀರ್ಣ 9 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಪರಿಣಾಮ ಮೇವು ಕೊರತೆ ತೀವ್ರವಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಸಿ ಹಾಗೂ ಒಣಹುಲ್ಲು ತರಿಸುತ್ತಿದೆ. ಪ್ರಸಕ್ತ ವರ್ಷ ಐದು ಲಕ್ಷ ರೂ.ಮೌಲ್ಯದ 35 ಟನ್ ಹುಲ್ಲು ಹೊರ ಜಿಲ್ಲೆಯಿಂದ ತರಲು ಟೆಂಡರ್ ಆಗಿದೆ.
  • ಅನುಭವಿ ಕಾರ್ಮಿಕರು ಇಲ್ಲ: ಹೆಚ್ಚುತ್ತಿರುವ ಸಣ್ಣ ಕುಟುಂಬಗಳು, ಕಾರ್ಮಿಕರ ಕೊರತೆ ದನ ಸಾಕಣೆ ಕುಂಠಿತಗೊಳ್ಳಲು ಇನ್ನೊಂದು ಕಾರಣ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೂಲಿ ಕೆಲಸಕ್ಕೆ ಹೆಚ್ಚಿನ ಕುಟುಂಬಗಳು ಹೊರಜಿಲ್ಲೆ ಹಾಗೂ ಹೊರ ರಾಜ್ಯದ ಜನರನ್ನು ಅವಲಂಬಿಸುತ್ತಿವೆ. ಮನೆ ಹಟ್ಟಿಯ ದನಗಳನ್ನು ಸಾಕಲು ಇವರು ನಿಪುಣರಲ್ಲ ಎನ್ನುವ ಅಭಿಪ್ರಾಯವಿದೆ.
  • ...........

ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯ ಕುರಿತು ಸಂಘ-ಸಂಸ್ಥೆಗಳು, ಸೀಶಕ್ತಿ ಸಂಘ, ಮಹಿಳಾ ಒಕ್ಕೂಟಗಳು ಭತ್ತದ ಬೇಸಾಯ ಮಾಡಿದರೆ ಅನುಕೂಲ. ಕೃಷಿಕರು ಮಿಶ್ರ ಬೆಳೆಯ ನಡುವೆ ಹಸಿರು ಹುಲ್ಲು ಬೆಳೆಸಬೇಕು. ಇದರಿಂದ ದನ ಸಾಕಣೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಇಲಾಖೆ ಹಾಗೂ ಕೆಎಂಎ್ ಕೂಡ ಹಸಿರು ಹುಲ್ಲು ಬೆಳೆಸಲು ಉತ್ತೇಜನ ನೀಡುತ್ತಿವೆ.
ಡಾ.ಅರುಣ್ ಕುಮಾರ್ ಶೆಟ್ಟಿ
ಉಪನಿರ್ದೇಶಕರು, ಪಶುಸಂಗೋಪನಾ ಇಲಾಖೆ, ದಕ

...........

ಮೇವು, ಕಾರ್ಮಿಕರ ಕೊರತೆ, ನಿರ್ವಹಣಾ ವೆಚ್ಚ ಹೆಚ್ಚಳ ಜನರು ದನ ಸಾಕಣೆಯಿಂದ ವಿಮುಖರಾಗಲು ಮುಖ್ಯ ಕಾರಣ. ಗೋವುಗಳನ್ನು ಹಾಲಿಗಾಗಿ ಮಾತ್ರ ಸಾಕಲು ಸಾಧ್ಯವಿಲ್ಲ. ಸೆಗಣಿ, ಗೋಮೂತ್ರ ಖರೀದಿಸುವ, ಅವುಗಳಿಗೆ ಮಾರುಕಟ್ಟೆ ಸೃಷ್ಟಿಸುವ ವ್ಯವಸ್ಥೆಯಾದರೆ ಹೆಚ್ಚು ಜನರು ದನ ಸಾಕಲು ಮುಂದೆ ಬರಬಹುದು.

  • ತಿರುಮಲೇಶ್ವರ ಪ್ರಸನ್ನ
    ದನ ಸಾಕಣೆದಾರರು, ತಣ್ಣೀರುಪಂಥ, ಬೆಳ್ತಂಗಡಿ
  • ...........

ಹಾಲು ಲೀಟರ್‌ಗೆ ಕನಿಷ್ಠ 50 ರೂ.ದೊರೆತರೆ ಮಾತ್ರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದನಗಳ ಸಾಕಣೆ ಸಾಧ್ಯ. ಗದ್ದೆಗಳಿದ್ದಾಗ ದನಗಳೂ ಇದ್ದವು. ಪಶು ಆಹಾರ ಅತ್ಯಂತ ದುಬಾರಿ. ಹೈನುಗಾರಿಕೆ ಉತ್ತೇಜಿಸಲು ಹಾಲು ಒಕ್ಕೂಟ ಹುಲ್ಲು ಬೆಳೆಯುವವರಿಗೆ 20 ಸಾವಿರ ರೂ.ಸಹಿತ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ.
* ಕೆ.ಪಿ.ಸುಚರಿತ ಶೆಟ್ಟಿ
ಅಧ್ಯಕ್ಷ, ದ.ಕ ಹಾಲು ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net