

ಅಹಮದಾಬಾದ್: ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಗುರುವಾರ ಬೃಹತ್ ರೋಡ್ ಶೋ ನಡೆಸಿದರು. ‘ಸಾಮಾನ್ಯ ಕಾರ್ಯ ಕರ್ತನಾಗಿ ಈ ನಗರದ ಬೀದಿಗಳಲ್ಲಿ ಪಕ್ಷದ ಪೋಸ್ಟರ್ ಅಂಟಿಸುತ್ತಿದೆ. ಇಂದು ಜನರ ಪ್ರೀತಿ ನೋಡಿ ತುಂಬ ಖುಷಿಯಾಗಿದೆ. ಕಳೆದ ಬಾರಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಗಾಂಧಿನಗರದ ಜನತೆ ನನ್ನನ್ನು ಲೋಕಸಭೆಗೆ ಕಳುಹಿಸಿ ಕೊಡಲಿದ್ದಾರೆ’ ಎಂದ ಷಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ, ವಿದ್ಯುನ್ಮಾನ ಮತಯಂತ್ರ (ಇವಿಎಂ) ಸರಿ ಇತ್ತು. ಈಗ ಲೋಕಸಭೆ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ಗೆ ಸೋಲಿನ ಭೀತಿ ಆವರಿಸಿಕೊಂಡಿದೆ. ಹಾಗಾಗಿಯೇ, ಪ್ರಿಯಾಂಕಾ ವಾದ್ರಾ ಇವಿಎಂ ಅನ್ನು ದೂಷಿಸಿದ್ದಾರೆ. ಇದು ಕಾಂಗ್ರೆಸ್ಸಿನ ಹಳೆಯ ಬುದ್ಧಿ. ಜನರು ಇವರ ಮಾತನ್ನು ನಂಬುವುದಿಲ್ಲ. ಇನ್ನು, ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷವೇ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೀಗಿರುವಾಗ ನಾವು ಏಕೆ ಅವರನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ಷಾ ಕಾಂಗ್ರೆಸ್ ಸುಳ್ಳುಗಳನ್ನು ಹೆಣೆದು, ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮೀಸಲಾತಿಯನ್ನು ಬೆಂಬಲಿಸುತ್ತದೆ. ಯಾವುದೇ ಕಾರಣಕ್ಕೂ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸುವುದಿಲ್ಲ. ಒಂದು ವೇಳೆ ಯಾರಾದರೂ ಅಂತಹ ಪ್ರಯತ್ನಕ್ಕೆ ಕೈಹಾಕಿದರೆ, ಅದನ್ನು ಸಹಿಸುವುದಿಲ್ಲ. ಸಿಎಎ ಈಗಾಗಲೇ ಜಾರಿಯಾಗಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಷಾ, ದೇಶಾದ್ಯಂತ ಬಿಜೆಪಿ ಪರವಾದ ಅಲೆ ಇದೆ. ಎನ್ಡಿಎ ಒಕ್ಕೂಟ ಈ ಬಾರಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಸುರಕ್ಷಿತ ಹಾಗೂ ಸಮೃದ್ಧವಾಗಿಸುತ್ತೇವೆ. ಕಾರ್ವಿುಕ ಕಲ್ಯಾಣ, ರೈತ ಕಲ್ಯಾಣದ ಯೋಜನೆಗಳನ್ನು ಮುಂದುವರಿಸುತ್ತೇವೆ. ಸಂಕಲ್ಪಪತ್ರದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುತ್ತೇವೆ ಎಂದರು.
ಸುರಕ್ಷತೆಗೆ ಆದ್ಯತೆ: ಇತ್ತೀಚೆಗೆ ಛತ್ತೀಸ್ಗಢದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹತರಾದ ನಕ್ಸಲರನ್ನು ಛತ್ತೀಸ್ಗಢ ಕಾಂಗ್ರೆಸ್ ನಾಯಕರು ‘ಹುತಾತ್ಮರು’ ಎಂದು ಕರೆದಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಷಾ, ಕಾಂಗ್ರೆಸ್ ಮತ್ತು ಅದರ ನಾಯಕರ ಮಾನಸಿಕತೆ ಎಂಥದ್ದು ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಕಾಂಗ್ರೆಸ್ ಆಡಳಿತವಿದ್ದಾಗ ನಕ್ಸಲ್ ಹಿಂಸಾಚಾರ ತಾರಕಕ್ಕೆ ಏರಿತ್ತು. ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕಳೆದ 10 ವರ್ಷಗಳಲ್ಲಿ ನಕ್ಸಲ್ವಾದದ ವಿರುದ್ಧ ಸಮರ ಸಾರಿದ್ದು, ಕೊನೆಯ ಹಂತಕ್ಕೆ ತಲುಪಿದ್ದೇವೆ. ಮುಂದಿನ ಕೆಲ ವರ್ಷಗಳಲ್ಲೇ ದೇಶ ನಕ್ಸಲ್ವುುಕ್ತವಾಗಲಿದೆ ಎಂದರು.
ಇಂದು ನಾಮಪತ್ರ ಸಲ್ಲಿಕೆ: ಅಮಿತ್ ಷಾ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ, ಗುರುವಾರ ಅವರು ಗುಜರಾತಿನ 3 ಕಡೆಗಳಲ್ಲಿ ರೋಡ್ ಶೋ ನಡೆಸಿದರು. ಇಲ್ಲಿ ಕಾಂಗ್ರೆಸ್ನಿಂದ ಸೋನಲ್ ಪಟೇಲ್ ಸ್ಪರ್ಧಿಸಿದ್ದಾರೆ. ಷಾ ಪತ್ನಿ ಸೋನಲ್ ಷಾ ಕೂಡ ಪ್ರಚಾರ ಆರಂಭಿಸಿದ್ದು, ಗಾಂಧಿನಗರದ ಮನೆ-ಮನೆಗಳಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ ಮತ್ತು ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಿದ್ದಾರೆ.