More

    ಅಂದು ಆರ್​ಸಿಬಿ ಕಪ್​ ಸೋಲಲು ನಾನೇ ಕಾರಣ; ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಮಾಜಿ ಆಟಗಾರ

    ಬೆಂಗಳೂರು: ಹೊಸ ಅಧ್ಯಾಯವನ್ನು ಸತತ ಸೋಲುಗಳಿಂದ ಶುರು ಮಾಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಆಡಿರುವ 7 ಪಂದ್ಯಗಳ ಪೈಕಿ ಆರರಲ್ಲಿ ಸೋತು ಒಂದರಲ್ಲಿ ಗೆಲ್ಲುವ ಮೂಲಕ ಪ್ಲೇಆಫ್​ ಹಾದಿಯನ್ನು ದುರ್ಗಮವಾಗಿಸಿಕೊಂಡಿದೆ. ಹಾಲಿ ಟೂರ್ನಮೆಂಟ್​ನಲ್ಲಿ ಆರ್​ಸಿಬಿಯ ಆಟಕ್ಕೆ ಹಲವರು ಅತೃಪ್ತಿ ವ್ಯಕ್ತಪಡಿಸುತ್ತಿರುವ ನಡುವೆಯೇ ಮಾಜಿ ಆಟಗಾರನೋರ್ವ ಅಭಿಮಾನಿಗಳ ಕ್ಷಮೆಯಾಷಿಸಿದ್ದಾರೆ.

    ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಮೂರು ಬಾರಿ 2009, 2011, 2016ರಲ್ಲಿ ಫೈನಲ್​ ಪ್ರವೇಶಿಸಿದೆ.  ಇದಾಗ್ಯೂ ಆರ್​ಸಿಬಿಗೆ ಒಮ್ಮೆಯೂ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, 2016ರಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆರ್​ಸಿಬಿ ವಿರೋಚಿತ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿತ್ತು.

    2016ರಲ್ಲಿ ನಡೆದ ಟೂರ್ನಿಯ ಫೈನಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ಮುಖಾಮುಖಿಯಾಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಡೇವಿಡ್​ ವಾರ್ನರ್​ ನಾಯಕತ್ವದ ಎಸ್​ಆರ್​ಎಚ್​ ತಂಡವು 8ರನ್​ಗಳ ಜಯ ಸಾಧಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಶೇನ್​ ವ್ಯಾಟ್ಸನ್​ ಆರ್​ಸಿಬಿ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.

    ಇದನ್ನೂ ಓದಿ: ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಪಾಂಡ್ಯ; ಹಾರ್ದಿಕ್​ಗೆ ಕಠಿಣ ಷರತ್ತು ಹಾಕಿದ ಬಿಸಿಸಿಐ

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಎಸ್​ಆರ್​ಎಚ್​ ತಂಡವು 19 ಓವರ್​ಗಳ ಮುಕ್ತಾಯಕ್ಕೆ 184ರನ್​ಗಳನ್ನು ಗಳಿಸಿತ್ತು. ಅಂತಿಮ ಓವರ್​ಅನ್ನು ನಾಯಕ ವಿರಾಟ್​ ಕೊಹ್ಲಿ ಶೇನ್​ ವ್ಯಾಟ್ಸನ್​ಗೆ ಬೌಲ್​ ಮಾಡುವಂತೆ ಸೂಚಿಸಿದರು. ಅದರಂತೆ ಬೌಲ್​ ಮಾಡಿದ ವ್ಯಾಟ್ಸನ್​ 4, 6, 6, 1, 1, 6 ರನ್​ಗಳನ್ನು ನೀಡುವ ಮೂಲಕ ದುಬಾರಿಯಾದರು ಮತ್ತು ಸನ್​ರೈಸರ್ಸ್​ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು.

    209ರನ್​ಗಳ ಗುರಿ ಬೆನ್ನತ್ತಿದ್ದ ಆರ್​ಸಿಬಿ ತಂಡವು ಕ್ರಿಸ್​ ಗೇಲ್​ ಹಾಗೂ ವಿರಾಟ್​ ಕೊಹ್ಲಿ ಅರ್ಧಶತಕಗಳ ನೆರವಿನಿಂದ 10.3 ಓವರ್​ಗಳಲ್ಲಿ 114 ರನ್ ಕಲೆಹಾಕಿತು. ಈ ವೇಳೆ ಕ್ರಿಸ್​ ಗೇಲ್​, ವಿರಾಟ್​ ಕೊಹ್ಲಿ ಸೇರಿದಂತೆ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ ಪರಿಣಾಮ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 200 ರನ್​ಗಳಿಸಿ 8 ರನ್​ಗಳಿಂದ ಸೋಲೊಪ್ಪಿಕೊಂಡಿತು.

    ಈ ಕುರಿತು ಮಾತನಾಡಿದ ಶೇನ್​ ವ್ಯಾಟ್ಸನ್​ ಆರ್​ಸಿಬಿ ತಂಡವು 2016 ರಲ್ಲೇ ಕಪ್ ಗೆಲ್ಲಬೇಕಿತ್ತು. ಆದರೆ ಅಂದು ನಾನು 4 ಓವರ್​ಗಳಲ್ಲಿ 61 ರನ್ ನೀಡಿದ್ದೆ. ಕೊನೆಯ ಓವರ್​ನಲ್ಲಿ 24 ರನ್ ನೀಡಿದ್ದು ಆರ್​ಸಿಬಿ ಪಾಲಿಗೆ ದುಬಾರಿಯಾಯಿತು. ಅಲ್ಲದೇ ಬ್ಯಾಟಿಂಗ್​ನಲ್ಲೂ ವಿಫಲನಾದೆ. ಅವತ್ತು ನನ್ನ ಕಳಪೆ ಪ್ರದರ್ಶನಿಂದಾಗಿ ಆರ್​ಸಿಬಿ ತಂಡ ಚೊಚ್ಚಲ ಬಾರಿಗೆ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿಕೊಂಡಿತು. ಅಂತಹದೊಂದು ಅವಕಾಶವನ್ನು ಕೈ ತಪ್ಪಿಸಿದಕ್ಕಾಗಿ ನಾನು ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಶೇನ್ ವಾಟ್ಸನ್ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts