12-14 ವಯಸ್ಸಿನ ಮಕ್ಕಳಿಗೆ ಮಾರ್ಚ್​ನಲ್ಲಿ ಲಸಿಕೆ ಲಭ್ಯ: ಲಸಿಕೆ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ ಎನ್.ಕೆ. ಅರೋರಾ ಮಾಹಿತಿ

Nation
Published on

ನವದೆಹಲಿ: 12-14 ವಯೋಗುಂಪಿನ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಿಕೆ ಪ್ರಕ್ರಿಯೆಗೆ ಮಾರ್ಚ್ ತಿಂಗಳಲ್ಲಿ ಚಾಲನೆ ಸಿಗುವ ಸಾಧ್ಯತೆಯಿದೆ ಎನ್ನುವುದಕ್ಕೆ ರಾಷ್ಟ್ರೀಯ ಲಸಿಕೆ ತಾಂತ್ರಿಕ ಸಲಹಾ ಗುಂಪಿನ (ಎನ್​ಟಿಎಜಿಐ) ಕೋವಿಡ್-19 ಕಾರ್ಯಪಡೆ ಅಧ್ಯಕ್ಷ ಎನ್.ಕೆ. ಅರೋರಾ ಸೋಮವಾರ ಸುಳಿವು ನೀಡಿದ್ದಾರೆ. 15-18 ವಯೋಗುಂಪಿನ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಮಾರ್ಚ್​ನಲ್ಲಿ 12-14 ವಯೋಮಿತಿ ಮಕ್ಕಳಿಗೆ ಕರೊನಾ ವ್ಯಾಕ್ಸಿನ್ ನೀಡಲು ಆರಂಭಿಸಲಾಗುವುದೆಂದು ಅರೋರಾ ಹೇಳಿದ್ದಾರೆ. 15-18 ವಯೋಗುಂಪಿನ ಒಟ್ಟ 7,40,57,000 ಮಕ್ಕಳ ಪೈಕಿ 3.45 ಕೋಟಿ ಮಕ್ಕಳು ಇದುವರೆಗೆ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 28 ದಿನಗಳಲ್ಲಿ ಎರಡನೇ ಡೋಸ್ ಪಡೆಯಬೇಕಿದೆ. ಈ ವಯೋಗುಂಪಿನ ಉಳಿದ ಮಕ್ಕಳಿಗೆ ಮೊದಲ ಡೋಸ್ ನೀಡಿಕೆ ಕಾರ್ಯ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಬಹುದು. ನಂತರ ಎರಡನೇ ಡೋಸ್ ನೀಡಿಕೆ ಫೆಬ್ರವರಿ ಅಂತ್ಯದೊಳಗೆ ಮುಗಿಯಬಹುದು. ಈ ಗುಂಪಿಗೆ ಎರಡೂ ಡೋಸ್ ನೀಡುವ ಅಭಿಯಾನ ಮುಗಿದ ನಂತರ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಚುಚ್ಚುಮದ್ದು ನೀಡಲು ಆರಂಭಿಸಲಾಗುತ್ತದೆ.

ರಾಜಧಾನಿಯಲ್ಲಿ ಹೆಚ್ಚು ಪರೀಕ್ಷೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶಿಫಾರಸು ಮಾಡಿರುವುದಕ್ಕಿಂತ 3 ಪಟ್ಟು ಹೆಚ್ಚು ಪ್ರಮಾಣದಲ್ಲಿ ಕರೊನಾ ಟೆಸ್ಟ್ ಮಾಡಲಾಗುತ್ತಿದೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಭಾರತದಲ್ಲಿ ಕರೊನಾ ತುಸು ಇಳಿಕೆ: ಭಾರತದಲ್ಲಿ ಕರೊನಾ ಸೋಂಕಿನ ಹಾವಳಿ ತುಸು ತಗ್ಗಿರುವುದು ಸಮಾಧಾನದ ಸಂಗತಿಯಾಗಿದೆ. ಸೋಮವಾರ 2.58 ಲಕ್ಷ ಹೊಸ ಕೇಸ್​ಗಳು ದೃಢಪಟ್ಟಿವೆ. 385 ರೋಗಿಗಳು ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳು ಭಾನುವಾರದ್ದಕ್ಕಿಂತ ಶೇಕಡ 5 ಕಡಿಮೆಯಾಗಿದೆ. ಸೋಂಕಿನ ನಿತ್ಯದ ಪಾಸಿಟಿವಿಟಿ ದರ ಶೇಕಡ 16.28ರಿಂದ ಶೇಕಡ 19.65ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಾಪ್ತಾಹಿಕ ದರ ಶೇಕಡ 14.41 ಆಗಿದೆ. ಕೋವಿಡ್ ವೈರಸ್ ಸೋಂಕಿನ ಒಟ್ಟು ಪ್ರಕರಣ 3.73 ಕೋಟಿಯಾಗಿದ್ದು ಅದರಲ್ಲಿ ಒಮಿಕ್ರಾನ್ ರೂಪಾಂತರಿಯ 8,209 ಕೇಸ್​ಗಳಿವೆ. ಕರ್ನಾಟಕ ಸಹಿತ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ಪ್ರಭೇದ ಪತ್ತೆಯಾಗಿದೆ. ಕರೊನಾ ಮಹಾಮಾರಿಯಿಂದ ಹೆಚ್ಚು ಬಾಧಿತವಾದ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರದಲ್ಲಿ 41,327 ಪ್ರಕರಣ ಹಾಗೂ 29 ಸಾವು ದಾಖಲಾಗಿದೆ.

ಲಸಿಕೆಗೆ ಬಲವಂತವಿಲ್ಲ ಎಂದ ಕೇಂದ್ರ: ಜನರ ಒಪ್ಪಿಗೆಯಿಲ್ಲದೆ ಬಲವಂತದಿಂದ ಕರೊನಾ ಲಸಿಕೆ ನೀಡುವುದಿಲ್ಲ ಅಥವಾ ಯಾವುದೇ ಉದ್ದೇಶಕ್ಕಾಗಿ ಕರೊನಾ ಲಸಿಕೆ ಸರ್ಟಿಫಿಕೆಟ್ ಕಡ್ಡಾಯಗೊಳಿಸಿಲ್ಲ ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಮ್ಮತಿ ಇಲ್ಲದೆ ಯಾರಿಗೂ ಲಸಿಕೆ ನೀಡುವ ಬ್ಗಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿಲ್ಲ. ಯಾವುದೇ ಉದ್ದೇಶಕ್ಕೆ ಲಸಿಕೆ ಸರ್ಟಿಫಿಕೆಟ್ ಹಾಜರುಪಡಿಸುವುದನ್ನು ಕೂಡ ಕಡ್ಡಾಯಗೊಳಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಜನವರಿ 13ರಂದು ಕೋರ್ಟ್​ಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಹೇಳಿದ್ದಾರೆ. ಕರೊನಾ ಮಹಾಮಾರಿ ಮುಂದುವರಿದಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್-19 ಲಸಿಕೆ ಹಾಕಲಾಗುತ್ತಿದೆ. ಮುದ್ರಣ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಲಸಿಕೆ ಪಡೆಯುವ ವಿಚಾರವನ್ನು ಪ್ರಚುರಪಡಿಸಲಾಗಿದೆ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ಲಸಿಕೆ ಹಾಕಿದ ನಂತರ ಉಂಟಾಗಬಹುದಾದ ಅಡ್ಡ-ಪರಿಣಾಮದ ಬಗ್ಗೆಯೂ ಪ್ರತಿ ಫಲಾನುಭವಿಗೆ ತಿಳಿಸಲಾಗುತ್ತದೆ ಎಂದೂ ಹೇಳಿದೆ. ಲಸಿಕೆ ಪಡೆಯದಿದ್ದರೆ ಕೆಲವು ಸೌಲಭ್ಯಗಳ್ನು ಕಡಿತಗೊಳಿಸುವುದಾಗಿ ಕೆಲವು ರಾಜ್ಯ ಸರ್ಕಾರಗಳು ಎಚ್ಚರಿಕೆ ನೀಡಿವೆ ಎಂದು ಕೇಂದ್ರ ಹೇಳಿದೆ.

ವೃದ್ಧರಲ್ಲಿ ಸೋಂಕು ಹೆಚ್ಚಳ: ಮಹಾರಾಷ್ಟ್ರದಲ್ಲಿ ವೃದ್ಧರಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಅಂಥವರಿಗೆ ತ್ವರಿತ ಚಿಕಿತ್ಸೆ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ.

ಎಂಆರ್​ಎನ್​ಎ ವ್ಯಾಕ್ಸಿನ್: ಭಾರತದ ಮೊದಲ ಎಂಆರ್​ಎನ್​ಎ ಲಸಿಕೆಯ ಮಾನವ ಮೇಲಿನ ಪರೀಕ್ಷೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ರಷ್ಯಾದಲ್ಲಿ ಒಮಿಕ್ರಾನ್ ಹಾವಳಿ: ರಷ್ಯಾದಲ್ಲಿ ಒಮಿಕ್ರಾನ್ ಪ್ರಭೇದದ ಹಾವಳಿ ಹೆಚ್ಚಾಗಿದ್ದು ಒಟ್ಟಾರೆ ದೈನಿಕ ಕರೊನಾ ಸೋಂಕಿನ ಪ್ರಕರಣಗಳು ದುಪ್ಪಟ್ಟುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಒಂದೇ ದಿನದಲ್ಲಿ 30,726 ಕೋವಿಡ್ ಕೇಸ್ ಪತ್ತೆಯಾಗಿದೆ ಎಂದು ರಷ್ಯಾದ ಕರೊನಾವೈರಸ್ ಟಾಸ್ಕ್ ಫೋರ್ಸ್ ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net