ಮನೆ ಬಾಗಿಲಿಗೇ ಆರೋಗ್ಯ ಸೇವೆ; ಜನವರಿಯಿಂದ ಸಿಎಂ ಆರೋಗ್ಯ ವಾಹಿನಿ | ಮೊದಲಿಗೆ 4 ಜಿಲ್ಲೆಗಳಲ್ಲಿ ಜಾರಿ

54274
Published on

ಪಂಕಜ ಕೆ.ಎಂ.
ಬೆಂಗಳೂರು: ನೆಗಡಿ, ಕೆಮ್ಮು, ಜ್ವರದಂತಹ ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಗಂಭೀರ ಕಾಯಿಲೆಗಳಿಗೂ ಇನ್ನು ಮುಂದೆ ಗ್ರಾಮೀಣ ಭಾಗದ ಜನರು ದೂರದ ಆಸ್ಪತ್ರೆಗಳನ್ನು ಅರಸಿ ಹೋಗಬೇಕಿಲ್ಲ. ಗ್ರಾಮೀಣರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮನೆ ಬಾಗಿಲಿಗೇ ವೈದ್ಯಕೀಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ‘ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ. ಜನವರಿಯಿಂದಲೇ ವೈದ್ಯಕೀಯ ಸೇವೆ ನೀಡಲು ಸನ್ನದ್ಧವಾಗುತ್ತಿದೆ.

ರಾಜ್ಯದಲ್ಲಿ ಮೊದಲ ಹಂತವಾಗಿ ಬೀದರ್, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗಲಿದೆ. ಸಾರ್ವಜನಿಕರ ಪ್ರತಿಕ್ರಿಯೆ ಹಾಗೂ ಯೋಜನೆಯ ಯಶಸ್ಸನ್ನು ಆಧರಿಸಿ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಜಿಲ್ಲಾವಾರು ಇರುವಂತಹ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡು ತಿಂಗಳಿಗೊಮ್ಮೆ ಪ್ರತಿ ಗ್ರಾಮಕ್ಕೆ ತೆರಳಿ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಆರೋಗ್ಯ ವಾಹಿನಿ ಯೋಜನೆಗಾಗಿ ಬಜೆಟ್​ನಲ್ಲಿ 11 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಯೋಜನೆಯಡಿ ಅಗತ್ಯ ವೈದ್ಯಕೀಯ ಉಪಕರಣಗಳೊಂದಿಗೆ ವೈದ್ಯರು, ಶುಶ್ರೂಷಕರು ಹಾಗೂ ವೈದ್ಯಕೀಯ ಸಿಬ್ಬಂದಿ ಸಂಚಾರಿ ಕ್ಲಿನಿಕ್​ಗಳ ಮೂಲಕ ಜನರ ಮನೆ ಬಾಗಿಲಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಪ್ರಾಥಮಿಕ ಚಿಕಿತ್ಸೆಯೊಂದಿಗೆ ಉಚಿತ ಔಷಧ ನೀಡಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಗುರುತಿಸಿ ನಿರ್ದಿಷ್ಟ ಆಸ್ಪತ್ರೆಗೆ ಶಿಫಾರಸು ಮಾಡಲಿದ್ದಾರೆ.

ಆರೋಗ್ಯ ವಾಹಿನಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯೊಂದಿಗೆ ಆರೋಗ್ಯ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಸಂಸ್ಥೆಯು ಇಲಾಖೆಗೆ ನಾಲ್ಕು ವಾಹನಗಳನ್ನು ನೀಡಿದೆ. ಇವುಗಳಿಗೆ ವೈದ್ಯಕೀಯ ಉಪಕರಣಗಳ ಅಳವಡಿಕೆಗಾಗಿ ಟೆಂಡರ್ ಆಹ್ವಾನಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ವಾಹನಗಳು ವೈದ್ಯಕೀಯ ಉಪಕರಣಗಳೊಂದಿಗೆ ಸಜ್ಜಾದ ಕೂಡಲೇ ಸಂಚಾರಿ ಕ್ಲಿನಿಕ್ ಸೇವೆ ಆರಂಭವಾಗಲಿದೆ. ಇದಕ್ಕಾಗಿ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ.

ಹೇಗಿರಲಿದೆ ವೈದ್ಯಕೀಯ ಸೇವೆ?

  • ಜಿಲ್ಲಾವಾರು ಹಳ್ಳಿಗಳ ಪಟ್ಟಿ ಮಾಡಿಕೊಂಡು, ತಿಂಗಳಿಗೆ ಒಮ್ಮೆ ಹೋಗುವಂತೆ ವೇಳಾಪಟ್ಟಿ ನಿಗದಿ
  • ಗ್ರಾಮದ ಸರ್ಕಾರಿ ಶಾಲೆ ಅಥವಾ ಸಮುದಾಯ ಭವನದಲ್ಲಿ ತಾತ್ಕಾಲಿಕ ಕ್ಲಿನಿಕ್ ನಿರ್ವಿುಸಿ ತಪಾಸಣೆ
  • ವಾಹನಗಳಲ್ಲಿ ಮಧುಮೇಹ, ರಕ್ತದೊತ್ತಡ ಹಾಗೂ ರಕ್ತ ಪರೀಕ್ಷೆಗೆ ಪೂರಕವಾದ ಉಪಕರಣ ಇರಲಿವೆ
  • ಹೃದಯ ಕಾಯಿಲೆ ಪತ್ತೆ ಹಚ್ಚಲು ಇಸಿಜಿ, ಎಕೋ ಕಾರ್ಡಿಯಾ ಪರೀಕ್ಷೆ, ಕ್ಯಾನ್ಸರ್ ರೋಗ ಪತ್ತೆ ಪರೀಕ್ಷೆ
  • ಕಣ್ಣಿನ ತಪಾಸಣೆ, ಬಾಯಿ ಆರೋಗ್ಯ ತಪಾಸಣೆಗೆ ಅಗತ್ಯ ಉಪಕರಣ, ಔಷಧ
  • ಪಾರ್ಶ್ವವಾಯು, ಶ್ವಾಸಕೋಶ ಸಂಬಂಧಿತ ಸಮಸ್ಯೆ, ಮೂಳೆ ಸಮಸ್ಯೆ (ಆಥೋ) ತಪಾಸಣೆ
  • ಕಣ್ಣು, ಮೂಗು, ಗಂಟಲು (ಇಎನ್​ಟಿ) ಸೇವೆ, ದಂತ ಮತ್ತು ಬಾಯಿ ಆರೋಗ್ಯದ ಪರೀಕ್ಷೆ

ಏನೆಲ್ಲ ಉಪಯೋಗ?

  • ವೈದ್ಯರೇ ಗ್ರಾಮಕ್ಕೆ ಹೋಗುವುದರಿಂದ ಜನ ದೂರದ ಆಸ್ಪತ್ರೆಗೆ ಹೋಗಬೇಕಿಲ್ಲ
  • ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನಲ್ಲೇ ಅಸಾಂಕ್ರಾಮಿಕ ಕಾಯಿಲೆ ಕಾಡುತ್ತಿದ್ದು, ಪತ್ತೆ ಸಾಧ್ಯ
  • ಕಾಯಿಲೆಗಳ ಅರಿವಿಲ್ಲದೆ ಜನ ಆರೋಗ್ಯ ತಪಾಸಣೆಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಇಂಥವರಿಗೆ ಸೇವೆ
  • ವೃದ್ಧರಿಗೆ ಎಲ್ಲ ಬಗೆಯ ಆರೋಗ್ಯ ತಪಾಸಣೆಯ ಅನುಕೂಲ
  • ಎಲ್ಲ ವಯೋಮಾನದವರಿಗೂ ನೇತ್ರ ತಪಾಸಣೆಯ ಸೌಲಭ್ಯ
  • ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ನಿಯಮಿತ ತಪಾಸಣೆ
  • ನಿರ್ಲಕ್ಷಿಸಲ್ಪಟ್ಟ ಬಾಯಿ ಆರೋಗ್ಯ ಕಾಪಾಡಿಕೊಳ್ಳಲು ಚಿಕಿತ್ಸೆ ಮತ್ತು ಸಲಹೆ
  • ಕ್ಯಾನ್ಸರ್ ಇದ್ದಲ್ಲಿ ಆರಂಭಿಕ ಹಂತದಲ್ಲಿ ಪತ್ತೆ ಮತ್ತು ಚಿಕಿತ್ಸೆಗೆ ಅನುಕೂಲ
  • ಸುಸಜ್ಜಿತ ವೈದ್ಯಕೀಯ ಉಪಕರಣಗಳಿಂದ ಆರೋಗ್ಯ ತಪಾಸಣೆ
  • ಗೋಚರಿಸದ ಸಮಸ್ಯೆಗಳ ಪತ್ತೆ, ಚಿಕಿತ್ಸೆ ಹಾಗೂ ಪರಿಹಾರ
  • ವೈದ್ಯರಿಂದ ಉಚಿತ ಆರೋಗ್ಯ ಸಲಹೆ
  • ಹೆಚ್ಚಿನ ಚಿಕಿತ್ಸೆಗೆ ದಿನಾಂಕ ಹಾಗೂ ಸಮಯಸಹಿತ ನಿರ್ದಿಷ್ಟ ಆಸ್ಪತ್ರೆಗೆ ಶಿಫಾರಸು

ಆಯಾ ಕಾಯಿಲೆಗಳಿಗೆ ಸಂಬಂಧಿಸಿದ ನುರಿತ ವೈದ್ಯರಿಂದ ತಪಾಸಣೆ

ಗ್ರಾಮೀಣ ಪ್ರದೇಶದ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಗಂಭೀರ ಹಂತದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುತ್ತಾರೆ. ಇದನ್ನು ತಪ್ಪಿಸಿ ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ವಣಕ್ಕಾಗಿ ಜನವರಿಗೆ ‘ಆರೋಗ್ಯ ವಾಹಿನಿ’ ಸೇವೆ ಆರಂಭಿಸಲಾಗುವುದು.

| ಡಿ. ರಂದೀಪ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ

ಆರೋಗ್ಯವಂತ ಸಮಾಜ ನಿರ್ವಣದ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಬದಲಾದ ಜೀವನಶೈಲಿ ಹಾಗೂ ಆರೋಗ್ಯದ ಬಗೆಗಿನ ನಿರ್ಲಕ್ಷ್ಯದಿಂದಾಗಿ ಕಿರಿಯ ವಯಸ್ಸಿನಲ್ಲಿಯೇ ಅಸಾಂಕ್ರಾಮಿಕ ರೋಗಗಳು ಜನರನ್ನು ಕಾಡಲಾರಂಭಿಸಿದೆ. ಸಕಾಲದಲ್ಲಿ ಆರೋಗ್ಯ ತಪಾಸಣೆ ನಡೆಸಿ ಆರಂಭದಲ್ಲೇ ಕಾಯಿಲೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಜನರ ಆರೋಗ್ಯ ಕಾಪಾಡುವುದು ಯೋಜನೆಯ ಉದ್ದೇಶ.

ಡಾ. ಕೆ. ಸುಧಾಕರ್ ಆರೋಗ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net