ಕರೊನಾ ಸಂಕಷ್ಟದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನೆರವು

IISC
Published on

ಬೆಂಗಳೂರು: ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಧಾವಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಎರಡು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಕಡಿಮೆ ವೆಚ್ಚ ಹಾಗೂ ಹೆಚ್ಚಿನ ದಕ್ಷತೆಯ ಆಕ್ಸಿಜನ್ ಕಾನ್ಸನ್​ಟ್ರೇಟರ್ ಹಾಗೂ ಈಗಿನ ಲಸಿಕೆಗಿಂತ ಹೆಚ್ಚು ಪರಿಣಾಮಕಾರಿಯಾದ 30 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಬಹುದಾದ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಜತೆಗೆ ಆಮ್ಲಜನಕ ಸರಬರಾಜು ವ್ಯವಸ್ಥೆಯಲ್ಲಿ ಆಗುತ್ತಿರುವ ನಷ್ಟವನ್ನು ಕಡಿಮೆ ಮಾಡಲು ತಾಂತ್ರಿಕ ನೆರವು ನೀಡುವುದಾಗಿ ಸರ್ಕಾರಕ್ಕೆ ಭರವಸೆ ನೀಡಿದೆ. ಗುರುವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಐಐಎಸ್ಸಿ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಅವರನ್ನು ಭೇಟಿ ಮಾಡಿ ಈ ಕಾರ್ಯದ ಬಗ್ಗೆ ಚರ್ಚೆ ನಡೆಸಿದರು.

ಕಾನ್ಸನ್​ಟ್ರೇಟರ್​ನ ಕ್ಲಿನಿಕಲ್ ಪರೀಕ್ಷೆಗೆ ಹಾಗೂ ತುರ್ತು ಬಳಕೆಗೆ ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್​ನಿಂದ (ಸಿಡಿಎಸ್​ಸಿಒ) ಅನುಮೋದನೆ ದೊರೆಯಲು ಸಹಕಾರ ನೀಡುವಂತೆ ಪೊ›.ರಂಗರಾಜನ್ ಸಚಿವರಿಗೆ ಮನವಿ ಮಾಡಿದರು. ಈ ಬಗ್ಗೆ ಭರವಸೆ ನೀಡಿದ ಸಚಿವ ಸುಧಾಕರ್, ಶೀಘ್ರವೇ ಈ ಆವಿಷ್ಕಾರದ ಕುರಿತು ಆರ್​ಜಿಯುಎಚ್​ಎಸ್ ಕುಲಪತಿಯವರೊಡನೆ ರ್ಚಚಿಸಲಾಗುವುದು ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಕೈಗಾರಿಕಾ ಘಟಕ ಹಾಗೂ ಆಸ್ಪತ್ರೆಗಳಲ್ಲಿ ಆಕ್ಸಿಜನ್ ತುಂಬಿಸುವಾಗ ವ್ಯರ್ಥವಾಗುವ ಪ್ರಮಾಣ ಕಡಿಮೆ ಮಾಡುವುದು ಮತ್ತು ಲಭ್ಯವಿರುವ ಆಕ್ಸಿಜನ್ ಅನ್ನು ಬೇಡಿಕೆಗೆ ತಕ್ಕಷ್ಟೇ ಸಮರ್ಪಕವಾಗಿ ಬಳಸುವ ಕುರಿತು ಸೂಕ್ತ ತಾಂತ್ರಿಕ ಸಲಹೆ ನೀಡಬೇಕು ಎಂದು ಸಚಿವ ಡಾ.ಕೆ. ಸುಧಾಕರ್ ಕೋರಿದ್ದಾರೆ. ಸಮಸ್ಯೆ ಪರಿಹರಿಸಲು ಎಲ್ಲ ಬಗೆಯ ತಾಂತ್ರಿಕ ಸಹಕಾರ ಹಾಗೂ ಎಂಜಿನಿಯರಿಂಗ್ ನೆರವು ನೀಡಲಾಗುವುದು ಎಂದು ಪೊ›.ರಂಗರಾಜನ್ ಭರವಸೆ ನೀಡಿದರು.

ಆಕ್ಸಿಜನ್ ಕಾನ್ಸನ್​ಟ್ರೇಟರ್: ಹತ್ತು ಎಲ್​ಪಿಎಂ ಸಾಮರ್ಥ್ಯದ ಆಕ್ಸಿಜನ್ ಕಾನ್ಸನ್​ಟ್ರೇಟರ್ ಅನ್ನು ಐಐಎಸ್​ಸಿ ಅಭಿವೃದ್ಧಿಪಡಿಸಿದ್ದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದೆ. ಚೀನಾದ ಕಾನ್ಸನ್​ಟ್ರೇಟರ್ ಗಳು ಶೇ.40-50 ಆಕ್ಸಿಜನ್ ನೀಡುತ್ತಿದ್ದರೆ, ಐಐಎಸ್​ಸಿಯ ಕಾನ್ಸನ್​ಟ್ರೇಟರ್​ಗಳು ಶೇ. 90ರಷ್ಟು ಆಕ್ಸಿಜನ್ ನೀಡುತ್ತಿವೆ.

ಹೊಸ ಲಸಿಕೆ: ಐಐಎಸ್ಸಿ ಹೆಚ್ಚು ನ್ಯೂಟ್ರಲೈಜ್ ಆಗಿರುವ ಲಸಿಕೆ ತಯಾರಿಸಿದ್ದು, ಮಾನವನ ಮೇಲಿನ ಪ್ರಯೋಗ ಇನ್ನಷ್ಟೇ ಆರಂಭವಾಗಬೇಕಿದೆ. ಈ ಲಸಿಕೆಯನ್ನು 30 ಡಿಗ್ರಿ ಸೆಲ್ಸಿಯಸ್ ಕೊಠಡಿ ತಾಪಮಾನದಲ್ಲೂ ಸಂಗ್ರಹಿಸಬಹು ದಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಲಸಿಕೆ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಸುಲಭವಾಗಿ ವಿತರಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net