

ಮಹಾರಾಷ್ಟ್ರ: ರಾಜ್ಯದ ಸೋಲಾಪುರ ಜಿಲ್ಲೆಯ ಪಂಡರಪುರ ಮಂಗಳ್ ವೇಡಾದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಡರಪುರ ಮಂಗಲ್ ವೇಡ ಪಾಂಡುರಂಗ, ವಿಠ್ಠಲ ಭಗವಾನ್ ಅವರ ಮೌಲ್ಯಗಳನ್ನು ಆಚರಿಸುವ ಅತ್ಯಂತ ಪವಿತ್ರವಾದ ಸ್ಥಳ. ಶರಣ ಬಸವೇಶ್ವರರು 14 ವರ್ಷ ಮಂತ್ರಿಯಾಗಿದ್ದ ಸ್ಥಳ ಪಂಡರಪುರ ಮಂಗಳ್ ವೇಡಾ. ಜಾತಿ ತಾರತಮ್ಯ ಹೋಗಲಾಡಿಸಲು, ಮನುಷ್ಯ ತಾರತಮ್ಯ ನಿವಾರಿಸಲು ಬಸವೇಶ್ವರರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಇಂಥಾ ಪವಿತ್ರವಾದ ಸ್ಥಳದಲ್ಲಿ ಬಿಜೆಪಿ ಗೆಲ್ಲಬಾರದು ಎಂದು ಹೇಳಿದರು.
"ಜವಾಹರಲಾಲ್ ಅವರಿಂದ ಮನಮೋಹನ್ ಸಿಂಗ್ ಅವರವರೆಗೂ ಕಾಂಗ್ರೆಸ್‌ನ ಎಲ್ಲಾ ಪ್ರಧಾನಿಗಳು ಅಂಬೇಡ್ಕರ್ ಅವರ ಆಶಯಕ್ಕೆ ತಕ್ಕಂತೆ, ಸಾಮಾಜಿಕ ನ್ಯಾಯದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ ಬಹುತ್ವದ ಚರಿತ್ರೆ ಹೊಂದಿದ್ದಾರೆ. ಕಾಂಗ್ರೆಸ್ ಬಹುತ್ವದಲ್ಲಿ ನಂಬಿಕೆ ಇಟ್ಟು ಬಹುತ್ವವನ್ನು ಆಚರಿಸುವ ಏಕೈಕ ಪಕ್ಷ. ಕಾಂಗ್ರೆಸ್ ಮೂಲಕ ಬಹುತ್ವದ ಸಂಸ್ಕೃತಿಯನ್ನು ಉಳಿಸಲು ನಡೆಯುತ್ತಿರುವ ರಾಜಕೀಯ ಚಳವಳಿಯಲ್ಲಿ ನೀವೆಲ್ಲಾ ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು" ಎಂದರು.
"ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡುತ್ತಾ ಬಂದಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಶ್ರೀಮಂತ ಮತ್ತು ಮೇಲ್ವರ್ಗದವರ ಪಕ್ಷವಾಗಿದ್ದು, ಈ ಕಾರಣಕ್ಕೇ ಇಂದು ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ. ಪ್ರಧಾನಿ ಮೋದಿ ಕೇವಲ ಅಂಬಾನಿ - ಅದಾನಿಯವರ ಸಂಪತ್ತು ಹೆಚ್ಚಿಸಲು ಕೆಲಸ ಮಾಡಿದರೇ ಹೊರತು ಬಡವರ, ರೈತರ, ಕಾರ್ಮಿಕರ, ಶ್ರಮಿಕರ ಬದುಕನ್ನು ಸುಧಾರಿಸಲು ಒಂದೇ ಒಂದು ಕಾರ್ಯಕ್ರಮವನ್ನೂ ರೂಪಿಸಲಿಲ್ಲ. ನಿಮ್ಮ ಮನೆ ಬಾಗಿಲಿಗೆ ತರಲಿಲ್ಲ. ಬದಲಿಗೆ ಪೆಟ್ರೋಲ್, ಡೀಸೆಲ್, ಗ್ಯಾಸ್, ಕಾಳು, ಬೇಳೆ ಎಲ್ಲದರ ಬೆಲೆ ಏರಿಸಿದರು. ಅಚ್ಛೇ ದಿನ್ ಆಯೆಗಾ ಎಂದರು. ಕಹಾಂ ಹೈ ಅಚ್ಛೆ ದಿನ್? ಬೆಲೆ ಏರಿಕೆಗೆ ಬ್ರೇಕ್ ಹಾಕುವುದಾಗಿ ಭಾಷಣ ಮಾಡಿದರು. ಆದರೆ ಬೆಲೆ ಏರಿಕೆ ಮುಗಿಲು ಮುಟ್ಟಿದೆ" ಎಂದು ಆರೋಪಿಸಿದರು.
"ಅಬಕಾರಿ ಇಲಾಖೆಯಲ್ಲಿ 700 ಕೋಟಿ ಲಂಚ ಪಡೆದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ನಡೆಸುತ್ತಿದೆ ಎನ್ನುವ ಹಸಿ ಹಸಿ ಸುಳ್ಳನ್ನು ಇದೇ ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಮೋದಿಯವರೇ ನೀವು ಸುಳ್ಳು ಭಾಷಣ ಮಾಡಿದ ಮಹಾರಾಷ್ಟ್ರಕ್ಕೇ ಬಂದು ನಿಮಗೆ ನೇರ ಸವಾಲು ಹಾಕುತ್ತಿದ್ದೇನೆ. ನಿಮ್ಮ ಭಾಷಣದ ಸುಳ್ಳನ್ನು ಸಾಬೀತು ಮಾಡಿದರೆ ನಾನು ಆ ಕ್ಷಣವೇ ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ. ಇಲ್ಲದಿದ್ದರೆ ನೀವು ರಾಜಕೀಯ ನಿವೃತ್ತಿ ಘೋಷಿಸುತ್ತೀರಾ? ನಿಮಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಇದ್ದರೆ ನನ್ನ ಸವಾಲನ್ನು ಸ್ವೀಕರಿಸಿ. ಆಪರೇಷನ್ ಕಮಲದ ಮೂಲಕ ಬಿಜೆಪಿ ಹಲವು ರಾಜ್ಯಗಳಲ್ಲಿ ಶಾಸಕರನ್ನು ಖರೀಧಿಸಿದರಲ್ಲಾ ಅದಕ್ಕೆಲ್ಲಾ ಅಷ್ಟು ಕೋಟಿ ಕೋಟಿ ಹಣ ಎಲ್ಲಿಂದ ಬಂತು ನಿಮಗೆ? ಮಹಾರಾಷ್ಟ್ರ ಜನತೆಗೆ ಉತ್ತರಿಸಿ" ಎಂದು ಸವಾಲು ಹಾಕಿದರು.
"ಏಕನಾಥ್ ಶಿಂಧೆ ಮಹಾರಾಷ್ಟ್ರ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರಲಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರು. ಈ ಆಪರೇಷನ್ಗೆ ಬಳಸಿದ ಹಣ ಯಾವುದು? ಭ್ರಷ್ಟಾಚಾರದ್ದು ಅಲ್ವಾ? ಆ ಹಣ ಎಲ್ಲಿಂದ ಬಂತು ಎಂದು ಮಹಾರಾಷ್ಟ್ರ ಜನರಿಗೆ ಹೇಳಬಲ್ಲಿರಾ? ಆಪರೇಷನ್ ಕಮಲದ ಬಿಜೆಪಿಯ ಹೊಲಸು ಸಂಸ್ಕಾರವನ್ನು ಕರ್ನಾಟಕ ಜನತೆ ತಿರಸ್ಕರಿಸಿದ್ದಾರೆ. ಈಗ ಮಹಾರಾಷ್ಟ್ರ ಜನತೆಯ ಸರದಿ. ನೀವೂ ಆಪರೇಷನ್ ಕಮಲದ ಸಂಸ್ಕಾರವನ್ನು ತಿರಸ್ಕರಿಸಿ ಸೆಡ್ಡು ಹೊಡೆಯಿರಿ" ಎಂದು ಹೇಳಿದರು.
"ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾಗದೆ ಕಾಂಗ್ರೆಸ್ ಸರ್ಕಾರ ಕರ್ನಾಟಕ ಜನತೆಗೆ ವಂಚಿಸಿದ್ದಾಗಿ ಮಹಾರಾಷ್ಟ್ರ ಬಿಜೆಪಿಸುಳ್ಳು ಜಾಹಿರಾತು ನೀಡಿದೆ. ಇವರಿಗೆ ನಾಚಿಕೆ ಇಲ್ಲ. ಮತ್ತು ಬಿಜೆಪಿಯ ಸುಳ್ಳಿನ ಸರದಾರರೇ ಕರ್ನಾಟಕಕ್ಕೆ ಬಂದು ನೋಡಿ. ನಿಮಗೆ ವಿಶೇಷ ವಿಮಾನದ ವ್ಯವಸ್ಥೆ ನಾನೇ ಮಾಡ್ತೀನಿ. ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿಯಾಗಿಲ್ಲ ಎಂದರೆ ನಾನು ರಾಜೀನಾಮೆ ಕೊಡ್ತೀನಿ. ನಮ್ಮ ನೆಲದಲ್ಲಿ ಗ್ಯಾರಂಟಿಗಳು ಜಾರಿ ಆಗಿರುವುದು ಸತ್ಯ ಆದರೆ ನಿಮ್ಮ ಸುಳ್ಳಿನ ಜಾಹಿರಾತನ್ನು ವಾಪಾಸ್ ಪಡೆದು ಮಹಾರಾಷ್ಟ್ರ ಜನತೆಯ ಕ್ಷಮೆ ಕೇಳಬೇಕು. ಈ ಸವಾಲು ಸ್ವೀಕರಿಸುತ್ತೀರಾ?" ಎಂದರು.
"ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ನಮ್ಮ ರಾಜ್ಯದ ಕೋಟಿ ಕೋಟಿ ಜನರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇಲ್ಲೂ ಮಹಾ ಆಘಾಡಿ ಅಧಿಕಾರಕ್ಕೆ ಬಂದು ಎಲ್ಲಾ ಭರವಸೆಗಳನ್ನು ಈಡೇರಿಸುವುದು ಶತಸಿದ್ದ. ಏಕೆಂದರೆ ನುಡಿದಂತೆ ನಡೆದ ಚರಿತ್ರೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಆದ್ದರಿಂದ ಬಿಜೆಪಿ ಸೋಲಿಸಿ ಆರ್ಥಿಕ ಶಕ್ತಿ ಪಡೆಯಿರಿ" ಎಂದು ಭರವಸೆ ನೀಡಿದರು.