

ಛತ್ತೀಸ್ಗಢ: ವಿಚಿತ್ರ, ವಿಭಿನ್ನ, ವಿಸ್ಮಯಕಾರಿ ವಿಷಯಗಳನ್ನು ಆಗಾಗ್ಗೆ ನಾವೆಲ್ಲರೂ ಜಾಲತಾಣಗಳ ಮುಖೇನ ಬಹಳ ವೇಗವಾಗಿ ಮಾಹಿತಿ ಪಡೆಯುತ್ತೇವೆ. ಕುರಿ ಹಸುವಿನ ಹಾಲು ಕುಡಿಯಿತು, ಎರಡು ತಲೆಯ ಕರು ಜನನ, ಮರದಿಂದ ರಕ್ತ ಸುರಿಯಿತು ಹೀಗೆ ಸಾಕಷ್ಟು ಬಗೆಯ ವಿಚಿತ್ರ, ಹುಬ್ಬೇರಿಸುವ ಸಂಗತಿಗಳು ನಮ್ಮನ್ನು ಬೆಂಬಿಡದೆ ಕಾಡುತ್ತಿರುತ್ತವೆ. ಸದ್ಯ ಇದೇ ಸಾಲಿಗೆ ಇಲ್ಲೊಂದು ಘಟನೆ ಸೇರಿದ್ದು, ಕುಡಿಯುವ ನೀರು ಇರಬೇಕಿದ್ದ ಬಾವಿಯಲ್ಲಿ ಪೆಟ್ರೋಲ್ ಕಂಡುಬಂದಿದೆ. ಇದು ಸ್ಥಳೀಯರನ್ನು ಆತಂಕಕ್ಕೆ ದೂಡಿದ್ದು, ಬಾವಿಯಯೊಳಗೆ (Petrol Well) ಇಂಧನ ಹೇಗೆ ಸಾಧ್ಯ? ಏನಿದು ಆಶ್ಚರ್ಯ ಎಂದು ತಮ್ಮಲ್ಲೇ ಪ್ರಶ್ನಿಸಿಕೊಳ್ಳುವಂತೆ ಮಾಡಿದೆ.
ಈ ವಿಚಿತ್ರ ಘಟನೆ ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ವರದಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಬಾವಿಯಲ್ಲಿ ನೀರು ತೆಗೆಯಲು ಹೋದ ಮನೆಯವರು, ರಾಟೆಗೆ ಸ್ಟೀಲ್ ಬಕೆಟ್ ಅನ್ನು ನೇತಾಕಿ, ಅದರಿಂದ ನೀರನ್ನು ತೆಗೆದಿದ್ದಾರೆ. ಈ ವೇಳೆ ನೀರಿನ ಬದಲು ಪೆಟ್ರೋಲ್ ಕಂಡು ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ. ಗೀದಂ ನಗರದ ವಾರ್ಡ್ ಸಂಖ್ಯೆ 12ರಲ್ಲಿ ಈ ಘಟನೆ ಸಂಭವಿಸಿದ್ದು, ಬಾವಿಯಲ್ಲಿ ನೀರಿನ ಬದಲು ಪೆಟ್ರೋಲ್ ಹೇಗೆ ಬಂತು ಎಂದು ಮನೆಯವರು ಗಾಬರಿಯಾಗಿದ್ದಾರೆ. ಮೇಲಿನಿಂದ ನೀರಿನಿಂತೆ ಕಂಡರು, ಅದರ ವಾಸನೆ, ಮತ್ತು ಬಣ್ಣ ಪೆಟ್ರೋಲ್ ಎಂಬುದನ್ನು ಖಚಿತಪಡಿಸಿತ್ತು.
ಮೊದಲ ಬಾರಿಗೆ ನಂಬಲು ಅಸಾಧ್ಯವಾದ ಹಿನ್ನಲೆ ಕುಟುಂಬಸ್ಥರು, ಮತ್ತೊಮ್ಮೆ ಬಕೆಟ್ ಇಳಿಸಿ, ನೀರು ತೆಗೆಯಲು ಪ್ರಯತ್ನಿಸಿದ್ದಾರೆ. ಈ ವೇಳೆಯೂ ಪೆಟ್ರೋಲ್ ಹೊರಬಂದಿರುವುದು ಅವರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಸ್ಥಳೀಯರು ಬಾವಿಯಲ್ಲಿ ಪೆಟ್ರೋಲ್ ಲಭ್ಯವಾಗುತ್ತಿದೆ ಎಂದು ಕುತೂಹಲ ಹಾಗೂ ಅತೀ ಆಸೆಯಿಂದ ತಮ್ಮ ಮನೆಯಿಂದ ಬಕೆಟ್ ಹಿಡಿದು, ಇಂಧನ ತೆಗೆದುಕೊಂಡು ಹೋಗಲು ಬಾವಿ ಬಳಿ ಸಾಲುಗಟ್ಟಿ ನಿಂತಿದ್ದಾರೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಬಾವಿ ಹೊಂದಿರುವ ಮನೆಯವರು, ಪೆಟ್ರೋಲ್ ಆದ ಕಾರಣ, ಇದು ಬೆಂಕಿಗೆ ಬಹಳ ಹತ್ತಿರ. ಏನಾದರೂ ಅಪಾಯ ಸಂಭವಿಸಿದರೆ ದೊಡ್ಡ ತೊಂದರೆ ಎದುರಾಗಬಹುದು ಎಂದು ನಗರದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಪಾಸಣೆ ನಡೆಸಿದ ಪೊಲೀಸರು, ಬಾವಿಯಿಂದ ನೂರು ಮೀಟರ್ನಲ್ಲಿ ಒಂದು ಪೆಟ್ರೋಲ್ ಪಂಪ್ ಇರುವುದನ್ನು ಪತ್ತೆಹಚ್ಚಿದ್ದಾರೆ. ಅಸಲಿಗೆ ಬಂಕ್ನಿಂದ ಪೆಟ್ರೋಲ್ ಕಳ್ಳತನ ಆಗಿರುವ ಕುರಿತು ಒಂದು ಪ್ರಕರಣ ದಾಖಲಾಗಿತ್ತು. ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಆದರೆ, ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಕಳ್ಳತನ ಆಗಿರುವ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ. ಇದರೊಂದಿಗೆ ಮತ್ತೊಂದು ಕೋನದಿಂದ ತನಿಖೆ ಆರಂಭಿಸಿದ ಖಾಕಿ ಪಡೆಗೆ ಗೊತ್ತಾಗಿದ್ದು, ಬಂಕ್ನಿಂದ ಪೆಟ್ರೋಲ್ ಸೋರಿಕೆಯಾಗಿ ಬಾವಿಯತ್ತ ಸಾಗಿದೆ ಎಂಬ ಸಂಗತಿ. ಈ ಅನುಕ್ರಮದಲ್ಲಿ ಬಾವಿಯಲ್ಲಿನ ನೀರು ಪೆಟ್ರೋಲ್ ಆಗಿ ಮಾರ್ಪಟ್ಟಿರುವುದು ದೃಢವಾಯಿತು.
ಸೋರಿಕೆಯನ್ನು ಗುರುತಿಸಿ ಆದಷ್ಟು ಬೇಗ ಸರಿಪಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು ಎಂದು ತಹಸೀಲ್ದಾರ್ ಹೇಳಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮನೆಯ ಸುತ್ತ ಅಗ್ನಿಶಾಮಕ ದಳ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಯ್ ತಿಳಿಸಿದ್ದಾರೆ,(ಏಜೆನ್ಸೀಸ್).