

ರಾಯಚೂರು: ಇತ್ತೀಚಿನ ದಿನಗಳಲ್ಲಿ ಮಧುಮೇಹ(ಸಕ್ಕರೆ) ಕಾಯಿಲೆ ಚಿಕ್ಕಮಕ್ಕಳಲ್ಲಿಯೂ ಕಂಡುಬರುತ್ತಿದ್ದು, ಪ್ರತಿಯೊಬ್ಬರು ಕಾಯಿಲೆಯ ಕುರಿತು ಜಾಗೃತರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಹೇಳಿದರು.
ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಘಟಕ, ರಿಮ್ಸ್ ಮೆಡಿಕಲ್ ಕಾಲೇಜು, ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಎಸ್.ಕೆ.ಇ.ಎಸ್ ಪ್ಯಾರಮೆಡಿಕಲ್ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಧುಮೇಹ ದಿನದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರು ಆರೋಗ್ಯದ ಕುರಿತು ನಿರ್ಲಕ್ಷೃ ವಹಿಸುತ್ತಿದ್ದಾರೆ. ಇದೇ ಕಾರಣದಿಂದ ಮಧುಮೇಹ ಪ್ರತಿಯೊಬ್ಬರಲ್ಲಿಯೂ ಸಾಮಾನ್ಯವಾಗಿದೆ. ಸಕ್ಕರೆ ಕಾಯಿಲೆ ಕೆಟ್ಟ ಜೀವನಶೈಲಿಯಿಂದ ಉಂಟಾಗುತ್ತದೆ. ಆರೋಗ್ಯಕರ ಹಾಗೂ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವುದು ಅತಿಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ರಿಮ್ಸ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಪಾಟೀಲ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಪಾಟೀಲ್, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣಾಧಿಕಾರಿ ಡಾ.ಶಾಕೀರ್ ಮೊಯಿನುದ್ದಿನ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್, ಮನೋವೈದ್ಯ ಡಾ.ಮನೋಹರ ಪತ್ತಾರ್ ಸೇರಿದಂತೆ ಇತರರಿದ್ದರು.