

ಪ್ರಾಸ್ಟೇಟ್ ಎಂಬುದು ಪುರುಷರ ಜನನೇಂದ್ರಿಯದಲ್ಲಿ ಸಣ್ಣ ವಾಲ್‌ನಟ್ (ಅಕ್ರೋಟು) ಗಾತ್ರದಲ್ಲಿ ಕಂಡುಬರುವ ಒಂದು ಗ್ರಂಥಿ. ಇದು ವೀರ್ಯವನ್ನು ಪೋಷಿಸುವ ಮತ್ತು ಸಾಗಿಸುವ ಸೆಮಿನಲ್ ದ್ರವವನ್ನು ಉತ್ಪಾದಿಸುತ್ತದೆ. ಈ ಪ್ರಾಸ್ಟೇಟ್ ಗ್ರಂಥಿಯಲ್ಲಿನ ಜೀವಕೋಶಗಳು ನಿಯಂತ್ರಣ ಮೀರಿ ಬೆಳೆಯುವುದರಿಂದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಸಂಭವಿಸಲು ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದಿದ್ದರೂ, ಎಲ್ಲ ವಯೋಮಾನದ ಪುರುಷರನ್ನು ಕಾಡುವ ಸಮಸ್ಯೆಯಾಗಿದೆ. ಕ್ಯಾನ್ಸರ್ ಕಾಣಿಸಿಕೊಂಡ ಆರಂಭದಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಜೀವಕೋಶಗಳು ವೃದ್ಧಿಯಾಗಿ, ಪ್ರಾಸ್ಟೇಟ್ ಆಚೆಗೂ ವಿಸ್ತರಿಸಲು ಆರಂಭಿಸಿದಾಗ, ದೇಹದಲ್ಲಿ ಇದರ ಲಕ್ಷಣಗಳು ಕಾಣಿಸಿ, ಇತರ ಭಾಗಗಳಿಗೆ ಗಂಭೀರ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕ್ಯಾನ್ಸರ್ ಹರಡುವಿಕೆಯಿಂದಾಗಿ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಕಷ್ಟವಾಗಬಹುದು.