

ಮಂಗಳೂರು: ಇಷ್ಟವಿಲ್ಲದಿದ್ದರೂ ಮದುವೆ ಮಾಡಿಸಿದ್ದಕ್ಕೆ ನೊಂದ ಯುವತಿಯೊಬ್ಬಳು ಮದುವೆಯಾದ ಬೆನ್ನಿಗೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಮಂಗಳೂರು ಹೊರವಲಯದ ಅಂಬ್ಲಮೊಗರು ಎಂಬಲ್ಲಿ ನವವಿವಾಹಿತೆ ರಶ್ಮಿ (24) ಆತ್ಮಹತ್ಯೆ ಮಾಡಿಕೊಂಡಾಕೆ. ಹದಿನೈದು ದಿನಗಳ ಹಿಂದೆ ಈಕೆಯ ವಿವಾಹವಾಗಿತ್ತು. ಗಂಜಿ ಮಠ ಮೂಲದ, ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಜತೆ ರಶ್ಮಿಯ ಮದುವೆ ಮಾಡಿಸಲಾಗಿತ್ತು.
ಸೆ. 3ರಂದು ಅಕ್ಕನ ಮನೆಗೆ ಬಂದಿದ್ದ ರಶ್ಮಿ, ಅಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಅಸ್ವಸ್ಥಗೊಂಡು ಗಂಭೀರ ಪರಿಸ್ಥಿತಿಯಲ್ಲಿದ್ದ ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾಳೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆ ಯಾಕೆ ಇಷ್ಟವಿರಲಿಲ್ಲ ಎಂಬಿತ್ಯಾದಿ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.