

ರಾಂಚಿ: ಜಾರ್ಖಂಡ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್ ಸೋರೆನ್ನನ್ನು ಬಂಧಿಸಿದ ಜಾರಿ ನಿರ್ದೇಶನಾಲಯ, ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಲು ಮುಂದಾಗಿದೆ. ಬಂಧನದವಾದ ಬೆನ್ನಲ್ಲೇ ಹೇಮಂತ್ ಕೊಟ್ಟ ಮೊದಲ ಪ್ರತಿಕ್ರಿಯೆ ಹೀಗಿದೆ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ತನ್ನ ಮೇಲೆ ದಾಳಿ ಮಾಡಲಿದೆ ಎಂಬುದನ್ನು ಮೊದಲೇ ಅರಿತು ತಮ್ಮ ಕುರ್ಚಿಗೆ ಹೇಮಂತ್ ಸೋರೆನ್ ರಾಜೀನಾಮೆ ನೀಡಿದರು ಎಂದು ಹೇಳಲಾಗಿದೆ. ಹೇಮಂತ್ ರಿಸೈನ್ ಮಾಡುತ್ತಿದ್ದಂತೆ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕರಲ್ಲಿ ಒಬ್ಬರಾದ ಸಾರಿಗೆ ಸಚಿವ ಚಂಪೈ ಸೊರೆನ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಜೈಲುಪಾಲಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಸೊರೆನ್, “ಇದೊಂದು ವಿರಾಮ ಅಷ್ಟೇ! ಜೀವನ ಒಂದು ದೊಡ್ಡ ಯುದ್ಧವಾಗಿದೆ. ಪ್ರತಿಕ್ಷಣವೂ ನಾನು ಹೋರಾಡಿದ್ದೇನೆ, ಮುಂದೆಯೂ ಹೋರಾಡುತ್ತೇನೆ. ಆದರೆ ಯಾವುದೇ ಕಾರಣಕ್ಕೂ ರಾಜಿಗೆ ಬೇಡುವುದಿಲ್ಲ. ನಾನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ, ಸೋಲನ್ನು ಒಪ್ಪಿಕೊಳ್ಳುವುದಿಲ್ಲ, ಜೈ ಜಾರ್ಖಂಡ್!" ಎಂದು ಹೇಳಿದ್ದಾರೆ,(ಏಜೆನ್ಸೀಸ್).