'ನನ್ನ ವ್ಯಕ್ತಿತ್ವ ಎಲ್ಲೇ ಹೋದರು ಬದಲಾಗೋದಿಲ್ಲ'! ಈ ಸ್ಪರ್ಧಿಯ ಮಾತನ್ನು ಒಪ್ಪಿದ ನೆಟ್ಟಿಗರು

ವಿಜಯವಾಣಿ - 2024-01-30T134338.246
Published on

ಬೆಂಗಳೂರು: ಈ ಬಾರಿಯ ಹ್ಯಾಪಿ ಬಿಗ್ ಬಾಸ್​ ಕನ್ನಡ ಸೀಸನ್​ 10 ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದ್ದು, ನೋಡುಗರಿಂದ ಭಾರೀ ಮನ್ನಣೆ ಹಾಗೂ ವೀಕ್ಷಣೆ ಪಡೆಯುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತು. ಈ ಕುರಿತಂತೆ ನಟ, ನಿರೂಪಕ ಕಿಚ್ಚ ಸುದೀಪ್ ಕೂಡ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ತಿಳಿಸಿದರು. ಫಿನಾಲೆಯಲ್ಲಿ ಸುದೀಪ್ ಅವರ ಎಡ-ಬಲದಲ್ಲಿ ನಿಂತಿದ್ದ ಟಾಪ್​ 2 ಫೈನಲಿಸ್ಟ್​ ಡ್ರೋನ್ ಪ್ರತಾಪ್ ಮತ್ತು ಕಾರ್ತಿಕ್​ ಮಹೇಶ್​ ಪೈಕಿ ಕಾರ್ತಿಕ್​ ವಿಜೇತರಾಗಿ ಹೊರಹೊಮ್ಮಿದರು.

ಬಿಗ್ ಬಾಸ್​ ಸೀಸನ್​ 10ರ ಪಟ್ಟವನ್ನು ಅಲಂಕರಿಸಿದ ಕಾರ್ತಿಕ್​, ಸುದೀಪ್ ಅವರಿಂದ ಪಡೆದ ಟ್ರೋಫಿಗೆ ಮುತ್ತಿಟ್ಟು, ತಮ್ಮ ಗೆಲುವನ್ನು ಸಂಭ್ರಮಿಸಿದರು. ಸೀಸನ್​ ವಿನ್ನರ್​ ಆಗುವ ಮೊದಲು ಕೂಡ ಬಹಳ ಕಾನ್ಫಿಡೆಂಟ್​ ಆಗಿದ್ದ ಕಾರ್ತಿಕ್​, ಗೆದ್ದ ಬಳಿಕ ಕೂಡ ಅದನ್ನು ತಮ್ಮ ಶೈಲಿಯಲ್ಲೇ ಪ್ರದರ್ಶಿಸಿದರು. ಮೊದಲಿನಿಂದಲೂ ತನ್ನ ತಾಯಿಗೆ ಪುಟ್ಟ ಮನೆಯನ್ನು ಕಟ್ಟಿಕೊಡಬೇಕು ಎಂಬ ಮಹತ್ವದ ಆಸೆಯನ್ನು ವ್ಯಕ್ತಪಡಿಸಿದ್ದ ಕಾರ್ತಿಕ್​, ಅದನ್ನು ಈಡೇರಿಸಿಕೊಳ್ಳುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.

ಇನ್ನು ಬಿಗ್ ಬಾಸ್​ ಮುಗಿದ ಬಳಿಕ ಬಿಬಿ ಆಟೋಗ್ರಾಫ್​ ಸಂದರ್ಶನದಲ್ಲಿ ಮಾತನಾಡಿದ ತನಿಷಾ ಮತ್ತು ಸಿರಿ, ಫಿನಾಲೆ ಮುಗಿದ ಬಳಿಕ ಒಂದಷ್ಟು ವಿಷಯಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್​ ಹೋಗಿ ಬಂದ ಮೇಲೆ ಆದ ಬದಲಾವಣೆ ಕುರಿತು ಮಾತನಾಡಿದ ತನಿಷಾ, "ಸದ್ಯ ಹೊಸ ಪ್ರಾಜೆಕ್ಟ್​ಗಳತ್ತ ಎದುರುನೋಡುತ್ತಿದ್ದೇನೆ. ಅದರ ಹೋಂ ವರ್ಕ್​ ನಡೀತಿದೆ" ಎಂದಿದ್ದಾರೆ.

ಇನ್ನು ಸಿರಿ ಅವರು, "ನಾನು ಹೋಗುವ ಮುನ್ನ ಹಾಗೂ ಹೊರಬಂದ ಬಳಿಕವೂ ಹಾಗೆಯೇ ಇದ್ದೀನಿ. ಸ್ವಲ್ಪ ಸಣ್ಣ ಆಗಿದ್ದೀನಿ ಬಿಟ್ಟರೆ, ಬೇರೇನೂ ಬದಲಾವಣೆ ಇಲ್ಲ. ನನ್ನ ಜೀವನಶೈಲಿ ಎಲ್ಲವೂ ಒಂದೇ ರೀತಿಯಿದೆ. ನಾನು ಯಾವಾಗಲೂ ಹೇಳ್ತೀನಿ, ನನ್ನ ವ್ಯಕ್ತಿತ್ವ ಎಲ್ಲೇ ಹೋದರು ಬದಲಾಗೋದಿಲ್ಲ. ಅದನ್ನು ಮನೆಯೊಳಗೆ ಕೂಡ ಸಾಬೀತುಪಡಿಸಿದ್ದೇನೆ. ಸದ್ಯ ಒಳ್ಳೊಳ್ಳೆ ಪ್ರಾಜೆಕ್ಟ್​ಗಳ ಮಾತುಕತೆ ನಡೆದಿದೆ. ಅದು ಅಂತಿಮಗೊಳ್ಳುವ ಹಂತದಲ್ಲಿದೆ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net