

ನವದೆಹಲಿ: ಹಮಾಸ್ ಉಗ್ರರ ದಾಳಿಯಿಂದ ಇಸ್ರೇಲ್ ರಣಾಂಗಣವಾಗಿದ್ದು, ಇಸ್ರೇಲ್ನ ಪ್ರತಿದಾಳಿಗೆ ಪ್ಯಾಲೆಸ್ತೀನ್ನ ಹಲವು ಪ್ರದೇಶಗಳು ಧ್ವಂಸಗೊಂಡಿವೆ. ತನ್ಮಧ್ಯೆ ಪ್ಯಾಲೆಸ್ತೀನ್ ಸಂತ್ರಸ್ತರ ನೆರವಿಗೆ ಅಮೆರಿಕ ಮುಂದಾಗಿದ್ದು, ದೊಡ್ಡ ಆರ್ಥಿಕ ನೆರವನ್ನು ಕೂಡ ಘೋಷಣೆ ಮಾಡಲಾಗಿದೆ.
ಮಾನವೀಯ ನೆಲೆಯಲ್ಲಿ ಗಾಜಾ ಹಾಗೂ ವೆಸ್ಟ್ ಬ್ಯಾಂಕ್ಗೆ 100 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಲಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಘೋಷಣೆ ಮಾಡಿದ್ದಾರೆ. ಸಂಘರ್ಷ ಪೀಡಿತ ಪ್ರದೇಶದಲ್ಲಿನ ಹಾಗೂ ಸಂತ್ರಸ್ತರಾಗಿರುವ 10 ಲಕ್ಷಕ್ಕೂ ಅಧಿಕ ಪ್ಯಾಲೆಸ್ತೀನಿಯರಿಗೆ ಈ ಆರ್ಥಿಕ ನೆರವಿನಿಂದ ಅನುಕೂಲ ಆಗಲಿದೆ ಎಂದೂ ಅವರು ಹೇಳಿದ್ದಾರೆ.
ಅಲ್ಲದೆ ಈ ಆರ್ಥಿಕ ನೆರವಿನ ಹಣ ಹಮಾಸ್ ಅಥವಾ ಭಯೋತ್ಪಾದಕ ಗುಂಪುಗಳ ಪಾಲಾಗದೆ ನಿಜವಾದ ಸಂತ್ರಸ್ತರಿಗೇ ತಲುಪುವಂತೆ ಸ್ಥಳದಲ್ಲೇ ಸರಿಯಾದ ವ್ಯವಸ್ಥೆಯನ್ನೂ ನಾವು ಹೊಂದಲಿದ್ದೇವೆ ಎಂದಿರುವ ಬೈಡನ್, ಇನ್ನೊಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.
ಬಹುಪಾಲು ಪ್ಯಾಲೆಸ್ತೀನಿಯರು ಹಮಾಸರಲ್ಲ ಹಾಗೂ ಹಮಾಸ್ ಜನರು ಪ್ಯಾಲೆಸ್ತೀನಿಯರನ್ನು ಪ್ರತಿನಿಧಿಸುತ್ತಿಲ್ಲ ಎಂಬುದು ನಾನು ಸ್ಪಷ್ಟಪಡಿಸುತ್ತಿರುವುದಾಗಿ ಹೇಳಿರುವ ಬೈಡನ್ ಇನ್ನೊಂದೆಡೆ ಇಸ್ರೇಲ್ಗೂ ಅಭಯ ನೀಡಿದ್ದಾರೆ. ನಿಮ್ಮೊಂದಿಗೆ ಯುಎಸ್ ಶಾಶ್ವತವಾಗಿ ಬೆಂಬಲಕ್ಕೆ ಇರಲಿದೆ, ನೀವು ಒಂಟಿಯಲ್ಲ ಎಂಬ ಸಂದೇಶವನ್ನು ಇಸ್ರೇಲ್ಗೆ ನೀಡಿದ್ದಾರೆ.
ಜೊತೆಗೆ ಇಸ್ರೇಲ್ ಈ ಪರಿಸ್ಥಿತಿಯನ್ನು ನಿಭಾಯಿಸಿದ ಕುರಿತು ಮೆಚ್ಚುಗೆ ಸೂಚಿಸಿರುವ ಬೈಡನ್, ಇಸ್ರೇಲ್ ಜನರ ಬದ್ಧತೆ, ಜಾಣತನ, ಧೈರ್ಯದ ಕುರಿತು ನನಗೆ ಹೆಮ್ಮೆ ಎನಿಸುತ್ತಿದೆ ಎಂದೂ ಹೇಳಿದ್ದಾರೆ.