ಚಂದ್ರಯಾನ-3 ಯಶಸ್ಸು: ಇಸ್ರೋ ನಾರಿಶಕ್ತಿಗೆ ನಮೋ ಎಂದ ಪ್ರಧಾನಿ ಮೋದಿ!

ISRO women
Published on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಮ್ಮಿಕೊಂಡ ಮಹತ್ವದ ಯೋಜನೆ ಚಂದ್ರಯಾನ-3, ವಿಕ್ರಮ್ ಲ್ಯಾಂಡರ್​ನ ಸಾಫ್ಟ್​ ಲ್ಯಾಂಡಿಂಗ್​ನಿಂದ ಭರ್ಜರಿ ಯಶಸ್ಸು ಗಳಿಸಿದೆ. ಇದೇ ಕಾರಣಕ್ಕೆ ಇಸ್ರೋ ಮಾತ್ರವಲ್ಲದೆ ಅಲ್ಲಿನ ವಿಜ್ಞಾನಿಗಳ ಬಗ್ಗೆಯೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬುಧವಾರ ಸಂಜೆ ವಿಕ್ರಮ್ ಲ್ಯಾಂಡರ್​ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗುವುದನ್ನು ಇಸ್ರೋ ತನ್ನ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ನೇರಪ್ರಸಾರ ಮಾಡಿತ್ತು. ಈ ಸಂದರ್ಭದಲ್ಲಿ ವಿದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೈವ್​ನಲ್ಲಿ ಹಾಜರಾಗಿ ಯಶಸ್ಸಿಗೆ ಸಾಕ್ಷಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇಂದು ವಿದೇಶದಿಂದ ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಮಾತ್ರವಲ್ಲ, ಈ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಭೇಟಿಯಾಗಿ ಶ್ಲಾಘಿಸಿದ್ದಾರೆ.

ಅದರಲ್ಲೂ ಈ ಯಶಸ್ಸಿನಲ್ಲಿ ಇಸ್ರೋದ ಮಹಿಳಾ ವಿಜ್ಞಾನಿಗಳ ದೊಡ್ಡ ಬಳಗವೇ ಇದ್ದು, ಅವರನ್ನು ಪ್ರಧಾನಿ ಮೋದಿ ಪ್ರತ್ಯೇಕವಾಗಿ ಭೇಟಿಯಾಗಿ ಮೆಚ್ಚುಗೆ ಸೂಚಿಸಿದ್ದಾರೆ. 'ನಾನು ಚಂದ್ರಯಾನ-3ರಲ್ಲಿ ಪಾಲ್ಗೊಂಡ ಇಸ್ರೋದ ಮಹಿಳಾ ವಿಜ್ಞಾನಿಗಳನ್ನು ಭೇಟಿಯಾಗಿದ್ದು, ಭಾರತೀಯ ವಿಜ್ಞಾನಕ್ಕೆ ಅವರು ನೀಡಿದ್ದ ಕೊಡುಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ ಮತ್ತು ನಾರಿಶಕ್ತಿ ನಮಿಸಿದೆ' ಎಂಬುದಾಗಿ ಮೋದಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net