ಒಂದೇ ಒಂದು ಲೈವ್​; ಚಂದ್ರನಲ್ಲಿಗೆ ಜಿಗಿಯಿತು 'ಇಸ್ರೋ' ಸಬ್​ಸ್ಕ್ರೈಬರ್ಸ್​ ಸಂಖ್ಯೆ

ISRO 8
Published on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಯೋಜನೆ ಚಂದ್ರಯಾನ-3 ಭರ್ಜರಿ ಯಶಸ್ಸು ಗಳಿಸಿದೆ. 40 ದಿನಗಳ ಹಿಂದೆ ಉಡಾವಣೆ ಆಗಿದ್ದ ಚಂದ್ರಯಾನ-3 ಇಂದು ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಆಗಿದೆ.

ಈ ಯಶಸ್ಸಿನ ಅಂತಿಮ ಘಟ್ಟದ ರೋಚಕ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲೆಂದೇ ಇಸ್ರೋ ತನ್ನ ಅಧಿಕೃತ ಯೂ-ಟ್ಯೂಬ್ ಚಾನೆಲ್​, ಫೇಸ್​ಬುಕ್​ ಪೇಜ್​​ನಿಂದ ನೇರಪ್ರಸಾರ ಮಾಡಿತ್ತು. ಈ ಲೈವ್​ ಆರಂಭವಾದ ತಕ್ಷಣ ಭರ್ಜರಿ ಸ್ಪಂದನೆ ಸಿಕ್ಕಿದ್ದು, ಲಕ್ಷಾಂತರ ಜನರು ನೋಡಲು ಆರಂಭಿಸಿದ್ದರು. ಮಾತ್ರವಲ್ಲ, ವೀಕ್ಷಿಸುವವರ ಸಂಖ್ಯೆ ನಿಮಿಷ ನಿಮಿಷಕ್ಕೂ ಲಕ್ಷಗಟ್ಟಲೆ ಏರಿಕೆ ಕಂಡಿತ್ತು.

ಲೈವ್ ಆರಂಭವಾದ 15 ನಿಮಿಷಗಳಲ್ಲೇ 35 ಲಕ್ಷಕ್ಕೂ ಅಧಿಕ ಮಂದಿ ನೇರಪ್ರಸಾರ ನೋಡಲು ಆರಂಭಿಸಿದ್ದಾರೆ. ಇದು 25ನೇ ನಿಮಿಷದಲ್ಲಿ 45 ಲಕ್ಷಕ್ಕೂ ಅಧಿಕವಾಗಿದ್ದು, ಆಗ 10 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದೆ. ನಂತರ ಕೆಲವೇ ನಿಮಿಷಗಳಲ್ಲಿ ಒಂದು ಹಂತದಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು.

ಒಂದು ಗಂಟೆ 11 ನಿಮಿಷಗಳ ಕಾಲ ನಡೆದ ಈ ನೇರಪ್ರಸಾರ ಒಟ್ಟು 33 ಲಕ್ಷಕ್ಕೂ ಅಧಿಕ ವ್ಯೂಸ್​ ಕಂಡಿದೆ. 24 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, 18 ಸಾವಿರಕ್ಕೂ ಅಧಿಕ ಕಮೆಂಟ್ಸ್​ ಬಂದಿವೆ. ಇವು ಇನ್ನೂ ಏರುತ್ತಲೇ ಇವೆ. ಇನ್ನೂ ವಿಶೇಷ ಎಂದರೆ ಇದೊಂದೇ ಲೈವ್ ಇಸ್ರೋ ಅಧಿಕೃತ ಯೂಟ್ಯೂಬ್​ ಚಾನೆಲ್​ನ ಸಬ್​ಸ್ಕ್ರೈಬರ್ಸ್​ ಸಂಖ್ಯೆಯನ್ನು ಚಂದ್ರನಲ್ಲಿಗೆ ಜಿಗಿಯುವಂತೆ ಮಾಡಿದೆ.

ಅರ್ಥಾತ್, ಚಂದ್ರಯಾನ-3 ಮಿಷನ್​​ನ ಅಂತಿಮ ಘಟ್ಟದ ಲೈವ್​ ಇಸ್ರೋ ಅಫಿಷಿಯಲ್ ಎಂಬ ಅಧಿಕೃತ ಯೂಟ್ಯೂಬ್ ಚಾನೆಲ್​​ನ ಸಬ್​ಸ್ಕ್ರೈಬರ್ಸ್​ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಏರಿಸಿದೆ. ಇದೊಂದೇ ಲೈವ್​ನಿಂದ ಈ ಚಾನೆಲ್​ಗೆ 10 ಲಕ್ಷಕ್ಕೂ ಅಧಿಕ ಹೊಸ ಸಬ್​ಸ್ಕ್ರೈಬರ್ಸ್​ ಸಿಕ್ಕಿದ್ದಾರೆ. ಅಂದರೆ ಲೈವ್ ಆರಂಭದಲ್ಲಿ 2.59 ಮಿಲಿಯನ್ ಇದ್ದ ಸಬ್​ಸ್ಕ್ರೈಬರ್ಸ್ ಸಂಖ್ಯೆ ಲೈವ್ ಮುಗಿಯುವಷ್ಟರಲ್ಲಿ 3.6 ಮಿಲಿಯನ್​ಗೂ ಅಧಿಕ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net