

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಯೋಜನೆಯಾದ ಚಂದ್ರಯಾನ-3ರ ಅಂತಿಮ ರೋಚಕ ಕ್ಷಣಗಳ ನಿರೀಕ್ಷೆಯಲ್ಲಿ ದೇಶ ಕಾತರದಿಂದ ಕಾಯುತ್ತಿದೆ.
ಚಂದ್ರಯಾನ-3 ಯಶಸ್ವಿಯಾಗಲಿ ಎಂದು ತಿರುಪತಿಯಲ್ಲಿ ಪೂಜೆ ಮಾಡಲಾಗಿತ್ತು. ಆ ಬಳಿಕ ಮೊನ್ನೆ ಕುಕ್ಕೆ ಶ್ರೀಸುಬ್ರಹಣ್ಯ ದೇವಸ್ಥಾನದಲ್ಲೂ ಪೂಜೆ ನಡೆದಿತ್ತು. ಮಾತ್ರವಲ್ಲ ನಿನ್ನೆಯಿಂದ ಹಲವರು ಚಂದ್ರಯಾನ ಯಶಸ್ವಿಯಾಗಲಿ ಎಂದು ಪೂಜೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಭಾರತದ ಸಿಂಗಾಪುರ ಹೈ ಕಮಿಷನರ್ ಕೂಡ 'ಕೋಟ್ಯಂತರ ಭಾರತೀಯರು ಚಂದ್ರಯಾನ-3 ಯಶಸ್ವಿ ಆಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ನಾನೂ ಅವರೊಂದಿಗೆ ಜೊತೆಯಾಗುತ್ತಿದ್ದೇನೆ' ಎಂದು ಅಗರಬತ್ತಿ ಹಚ್ಚಿ ಪ್ರಾರ್ಥಿಸಿದ್ದಾರೆ.
ಚಂದ್ರಯಾನ-3 ಯಶಸ್ಸಿಗೆ ಜನರು ಪ್ರಾರ್ಥಿಸುತ್ತಿದ್ದು, ಈ ಸಲ ಯಶಸ್ವಿ ಆಗಿಯೇ ಆಗುತ್ತದೆ ಎಂದು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಕೆಲವರು ಹೀಗೂ ಯೋಚನೆ ಮಾಡುತ್ತಿರುವುದು ಕಂಡುಬಂದಿದೆ.
ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡು ಕೆಲವರು ಚಂದ್ರಯಾನದ ಯಶಸ್ಸಿನ ಕುರಿತು ಕಾತರದಿಂದ ಕಾಯುತ್ತಿದ್ದಾರೆ. ಇಸ್ರೋ ಅಧ್ಯಕ್ಷರ ಹೆಸರಿನಲ್ಲಿರುವ ಸೋಮ ಎಂದರೆ ಚಂದ್ರ ಎಂದರ್ಥ. ಸೋಮನಾಥ ಎಂದರೆ ಚಂದ್ರನಿಗೆ ಅಧಿಪತಿ, ಇದೊಂದು ಆಶಾದಾಯಕ ಕಾಕತಾಳೀಯ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.