

ಹೈದರಾಬಾದ್: ಒಬ್ಬನೇ ವ್ಯಕ್ತಿಯಲ್ಲಿ ಎರಡೂ ಜನನಾಂಗ ಇರುವುದು ಕಂಡುಬಂದಿರುವ ಅತ್ಯಪರೂಪದ ಪ್ರಕರಣವೊಂದು ವರದಿಯಾಗಿದೆ. 40 ವರ್ಷದ ಪುರುಷನಲ್ಲಿ ಸ್ತ್ರೀ-ಪುರುಷ ಜನನಾಂಗ ಇದ್ದಿದ್ದು, ಕೊನೆಗೆ ವೈದ್ಯರು ಈತನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದಾರೆ.
ಪರ್ಸಿಸ್ಟೆಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್ ಎನ್ನಲಾಗುವ ಈ ಸ್ಥಿತಿ ಅತ್ಯಪರೂಪವಾಗಿದ್ದು, ಜಗತ್ತಿನಲ್ಲಿ ಈ ವರೆಗೆ ಇಂಥ 300 ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಇದುವರೆಗೆ ಇಂಥ ಇಪ್ಪತ್ತು ಪ್ರಕರಣಗಳು ಕಂಡುಬಂದಿವೆ.
ಹೈದರಾಬಾದ್ನ ಮಂಚೇರಿಯಲ್ನ ಈ ವ್ಯಕ್ತಿಯಲ್ಲಿ ಎರಡೂ ಜನನಾಂಗ ಇದ್ದು, ಸಿಕಂದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಪರೋಸ್ಕೋಪಿಕ್ ಸರ್ಜರಿ ಮಾಡಲಾಗಿದೆ. ಕಿಬ್ಬೊಟ್ಟೆ ನೋವು ಹಾಗೂ ನಪುಂಸಕತೆ ಹಿನ್ನೆಲೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
ದೈಹಿಕವಾಗಿ ಸಹಜವಾಗಿಯೇ ಕಾಣಿಸುತ್ತಿದ್ದ ಈ ವ್ಯಕ್ತಿಯಲ್ಲಿ ಸ್ತ್ರೀ ಜನನಾಂಗದ ಆಂತರಿಕ ರಚನೆಗಳಾದ ಗರ್ಭಾಶಯ, ಫ್ಯಾಲೋಪಿಯನ್ ಟ್ಯೂಬ್ ಮಾತ್ರವಲ್ಲದೆ ಭಾಗಶಃ ಯೋನಿ ಕೂಡ ಕಂಡುಬಂದಿದೆ. ಈತನಲ್ಲಿ ಶಿಶ್ನವಿದ್ದರೂ ವೃಷಣ ಕಿಬ್ಬೊಟ್ಟೆಯಲ್ಲಿತ್ತು. ಹೀಗಾಗಿ ವೀರ್ಯ ಉತ್ಪಾದನೆ ಇರಲಿಲ್ಲ.
ಆತನನ್ನು ಲ್ಯಾಪರೋಸ್ಕೋಪಿಕ್ ಹಿಸ್ಟಿರೋ ಸಾಲ್ಪಿಂಗೆಕ್ಟಮಿ ಸರ್ಜರಿಗೆ ಒಳಪಡಿಸಲಾಗಿದೆ. ಹದಿನೆಂಟು ವರ್ಷಕ್ಕೆ ಮೊದಲೇ ಆತ ಆಸ್ಪತ್ರೆಗೆ ಬಂದು ವಿಷಯ ಗೊತ್ತಾಗಿರುತ್ತಿದ್ದರೆ ಸಂತಾನೋತ್ಪತ್ತಿ ಶಕ್ತಿ ಮರುಕಳಿಸಿರುತ್ತಿತ್ತು. ಆದರೆ ಈಗ ತಡವಾದ್ದರಿಂದ ನಪುಂಸಕತೆ ಉಳಿದುಕೊಳ್ಳುವಂತಾಗಿದೆ. ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ವೈದ್ಯರ ಸೂಚನೆಯಂತೆ ಆರೈಕೆಯಲ್ಲಿದ್ದಾನೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. -ಏಜೆನ್ಸೀಸ್