ಕನ್ನಡ ಸಾರಸ್ವತ ಲೋಕದ ಧೀಮಂತ

Huyilagola
Published on
| ಸುಧಾ ಹುಚ್ಚಣ್ಣವರ

ಕನ್ನಡಮ್ಮನ ಹೆಮ್ಮೆಯ ಪುತ್ರ, ಮುದ್ರಣಕಾಶಿಗೆ ಮೆರುಗು ನೀಡಿದ ಶ್ರೇಷ್ಠ ನಾಟಕಕಾರ, ಸಾಮಾಜಿಕ ಚಿಂತಕ... ಹೀಗೆ ಬಹುಮುಖ ವ್ಯಕ್ತಿತ್ವದ ಮರೆಯದ ನೆನಪು ಹುಯಿಲಗೋಳ ನಾರಾಯಣರಾಯರು. ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರೇ ಅವರು. ಕನ್ನಡದ ಶ್ರೇಷ್ಠ ಕವಿಗಳಾಗಿ, ನಾಟಕ ರಚನೆಕಾರರಾಗಿ ಸಾಹಿತ್ಯಿಕ- ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೂಲ್ಯಕೊಡುಗೆ ನೀಡಿದ ಧೀಮಂತರು.

ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಮುದ್ರಣ ಹೀಗೆ ಹಲವು ಹಿರಿಮೆಗಳಿಗೆ ಪಾತ್ರವಾದ ಗದುಗಿನ ಪುಣ್ಯಭೂಮಿ ಇವರ ಜನ್ಮಸ್ಥಳ. 1884ರ ಅಕ್ಟೋಬರ್ 4ರಂದು ಇವರ ಜನನ. ‘ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು’ ಎಂಬಂತೆ ಚಿಕ್ಕಂದಿನಿಂದಲೂ ಇವರಲ್ಲಿದ್ದ ಸೃಜನಶೀಲ ಹವ್ಯಾಸಗಳು ಅಸಾಮಾನ್ಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕಾರಣವಾಯಿತು.

ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ವಿಶೇಷವೆನಿಸಿಕೊಂಡಿರುವ ಹುಯಿಲಗೋಳ ನಾರಾಯಣರಾಯರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಗೈದವರು. ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದವರು, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ, ಐತಿಹಾಸಿಕ ಹೀಗೆ ವಿಭಿನ್ನ ನಾಟಕಗಳನ್ನು ರಚಿಸಿ ಪ್ರದರ್ಶನಗೈದವರು. ತಮ್ಮ ನಾಟಕಗಳಿಗಾಗಿ ತಾವೇ ಗೀತೆಗಳನ್ನು ರಚಿಸುತ್ತಿದ್ದರು. ಸಂಗೀತ, ಕುಮಾರರಾಮ ಚರಿತ, ವಿದ್ಯಾರಣ್ಯ, ಧರ್ಮ ರಹಸ್ಯ, ಅಜ್ಞಾತವಾಸ, ಭಾರತ ಸಂಧಾನ, ಶಿಕ್ಷಣ ಸಂಭ್ರಮ ಹೀಗೆ ಹಲವು ಪ್ರಮುಖ ನಾಟಕಗಳನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಕಾದಂಬರಿಗಳ ಬರಹದಲ್ಲಿಯೂ ಆಸಕ್ತಿ ತೋರಿದವರು. ಮೂಡಲು ಹರಿಯಿತು ಎನ್ನುವ ಕಾದಂಬರಿ ಪ್ರಸಿದ್ಧಿ ಪಡೆಯಿತು. ನಾಟಕ, ಗದ್ಯ, ಪದ್ಯ, ಪ್ರಬಂಧ, ಕಾದಂಬರಿ ಹಲವು ವಿಭಿನ್ನ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಸ್ವಾಗತ ಗೀತೆಗಳನ್ನು ಸಹ ಬರೆದು ಖುದ್ದಾಗಿ ತಾವೇ ಕಾರ್ಯಕ್ರಮಗಳಲ್ಲಿ ಹಾಡುವ ವಿಶೇಷ ಅಭಿರುಚಿ ಇವರಲ್ಲಿತ್ತು. ಇಂತಹ ಬಹುಮುಖ ಪ್ರತಿಭೆಯ ಸಾಧನೆ, ವ್ಯಕ್ತಿತ್ವವನ್ನು ಅರಸಿ ಬಂದ ಪ್ರಶಸ್ತಿ, ಪುರಸ್ಕಾರಗಳು ಹಲವು. 1954ರಲ್ಲಿ ಇವರ ’ಪತಿತೋದ್ಧಾರ’ ನಾಟಕಕ್ಕೆ ಮುಂಬೈ ಸರ್ಕಾರ ಬಹುಮಾನ ನೀಡಿ ಗೌರವಿಸಿತು. 1952ರಲ್ಲಿ ಕಲೋಪಾಸಕ ಮಂಡಳಿಯಿಂದ ಸನ್ಮಾನ ಮಾಡಲಾಯಿತು. 1935 ರಲ್ಲಿ ನಮ್ಮವರು ನಮಗೆ ಹೆಮ್ಮೆ ಎಂಬಂತೆ ಗದುಗಿನ ನೆಲದ ಹೆಮ್ಮೆಯ ಸುಪುತ್ರ ಹುಯಿಲಗೋಳ ನಾರಾಯಣರಾಯರ ಸಾಧನೆ ಗಮನಿಸಿ ಗದಗ- ಬೆಟಗೇರಿ ನಾಗರಿಕರಿಂದ ಸನ್ಮಾನ ದೊರೆಯಿತು. ಗದಗ ವಕೀಲರ ಸಂಘದಿಂದ 1955 ರಲ್ಲಿ ಗೌರವ ಪುರಸ್ಕಾರ ನೀಡಲಾಯಿತು. 1956ರಲ್ಲಿ ಕರ್ನಾಟಕ ಸರ್ಕಾರ ಪ್ರಥಮ ರಾಜ್ಯೋತ್ಸವ ಸಂದರ್ಭದಲ್ಲಿ ಇವರನ್ನು ಗೌರವಿಸಿತು. 1961ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಪುರಸ್ಕಾರವೂ ಲಭ್ಯವಾಯಿತು. ಹುಯಿಲಗೋಳ ನಾರಾಯಣರಾಯರು ತಮ್ಮ 86ನೇ ವಯಸ್ಸಿನಲ್ಲಿ 1971ರ ಜುಲೈ 4ರಂದು ನಮ್ಮನ್ನಗಲಿದರು. ಇವರ ಇಡೀ ಬದುಕೇ ಒಂದು ಸುಂದರ ಕಾವ್ಯದಂತೆ ಕಂಗೊಳಿಸುತ್ತಿತ್ತು.

ಉದಯವಾಗಲಿ ಚೆಲುವ ಕನ್ನಡ ನಾಡು...

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎನ್ನುವ ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ ಎನ್ನಬಹುದು. ಪ್ರತಿಯೊಬ್ಬರ ಮನಸ್ಸಿನ ಮೂಲೆಯಲ್ಲಿ ಅದೆಷ್ಟೋ ಸಂದರ್ಭದಲ್ಲಿ ಗುನುಗುಡುವ ಈ ಗೀತೆಯು, ಕನ್ನಡ ನಾಡು-ನುಡಿಯ ಸೊಗಡನ್ನು ಮೈ ತುಂಬಿಕೊಂಡಿರುವ ಭಾವನೆಗಳ ಸಂಗಮವಾಗಿದೆ. ಈ ಗೀತೆಯ ರಚನಾಕಾರರೇ ಹುಯಿಲಗೋಳರು. ಈ ಹಾಡು ಕನ್ನಡ ನಾಡಿನೊಂದಿಗೆ ಎಂದೂ ಮರೆಯದ ಬಾಂಧವ್ಯದ ರೀತಿಯಲ್ಲಿ ಬೆಸೆದುಕೊಂಡಿದೆ. 1924ರಲ್ಲಿ ಬೆಳಗಾವಿಯಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ ಸಂದರ್ಭದಲ್ಲಿ ಈ ಗೀತೆಯನ್ನು ಹಾಡಲಾಗಿತ್ತು. ಸಂಗೀತ ಕ್ಷೇತ್ರದ ಮೇರು ಧ್ವನಿ ಗಂಗೂಬಾಯಿ ಹಾನಗಲ್ ಅವರು ಈ ಗೀತೆಯನ್ನು ಅಂದು ಹಾಡಿದ್ದರು. ಈ ಕನ್ನಡ ನಾಡು ನುಡಿ, ನೆಲ ಜಲ, ಪ್ರಕೃತಿಯ ಸೊಬಗು, ಗದುಗಿನ ವೀರನಾರಾಯಣನ ನೆನೆಯುವ ಭಾವ ಸಿರಿ, ಕನ್ನಡ ಸಂಸ್ಕೃತಿಯ ವೈಶಿಷ್ಟ್ಯಗಳು, ಕಲಾತ್ಮಕ ಗುಣವಿಶೇಷತೆಗಳನ್ನು ಈ ಗೀತೆಯಲ್ಲಿ ಸೆರೆ ಹಿಡಿಯಲಾಗಿದೆ.

(ಲೇಖಕರು ಉಪನ್ಯಾಸಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net