

ನವದೆಹಲಿ: ಎಕ್ಸ್ ಸೋಷಿಯಲ್ ಮೀಡಿಯಾ ಆ್ಯಪ್ ಮಾಲೀಕ ಎಲಾನ್ ಮಸ್ಕ್ ಬಗ್ಗೆ ಬಹುತೇಕರಿಗೆ ಗೊತ್ತಿರುವಂಥದ್ದೇ. ದೊಡ್ಡ ಮೊತ್ತಕ್ಕೆ ಟ್ವಿಟರ್ ಮೈಕ್ರೊ ಬ್ಲಾಗಿಂಗ್ ಆ್ಯಪ್ ಖರೀದಿಸಿ ಗಮನ ಸೆಳೆದಿದ್ದ ಎಲಾನ್ ಮಸ್ಕ್, ಬಳಿಕ ಅದರಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದ್ದರು.
ಆ್ಯಪ್ನಲ್ಲಿ ಹಲವಾರು ಬದಲಾವಣೆ-ಸುಧಾರಣೆಗಳನ್ನು ತಂದಿದ್ದಷ್ಟೇ ಅಲ್ಲದೆ, ಕೊನೆಗೆ ಅದರ ಹೆಸರನ್ನೇ ಬದಲಿಸಿ ಬಿಟ್ಟಿದ್ದರು. ಹೀಗಾಗಿ ಟ್ವಿಟರ್ ಇದೀಗ ಎಕ್ಸ್ ಆಗಿ ಚಲಾವಣೆಯಲ್ಲಿದೆ. ಈ ಎಕ್ಸ್ ಮೂಲಕವೇ ಎಲ್ಲವನ್ನೂ ಎಕ್ಸ್ಪ್ರೆಸ್ ಮಾಡುತ್ತಿರುವ ಎಲಾನ್ ಮಸ್ಕ್ ದುಡಿಮೆ ಎಷ್ಟಿರಬಹುದು ಎಂಬ ಕುತೂಹಲ ಸಹಜವೇ. ಅಂತಹ ಕುತೂಹಲವನ್ನು ತಣಿಸುವಂಥ ಮಾಹಿತಿಯೊಂದು ಹೊರಬಿದ್ದಿದೆ.
ಮೂರು ವರ್ಷಗಳ ಹಿಂದೆ 24.6 ಬಿಲಿಯನ್ ಡಾಲರ್ ಸಿರಿವಂತಿಕೆ ಹೊಂದಿದ್ದ ಮಸ್ಕ್ ಈಗ ಬರೋಬ್ಬರಿ 250 ಬಿಲಿಯನ್ ಡಾಲರ್ ಶ್ರೀಮಂತ. ಈತ 2022ರಲ್ಲಿ 44 ಬಿಲಿಯನ್ ಡಾಲರ್ಗೆ ಟ್ವಿಟರನ್ನು ಖರೀದಿಸಿದ್ದಾಗ ಹಲವರು ಹುಬ್ಬೇರಿಸಿದ್ದರು.
ಅಂದರೆ ಕಳೆದ ಮೂರು ವರ್ಷಗಳಲ್ಲಿ ಎಲಾನ್ ಮಸ್ಕ್ನ ನೆಟ್ ವರ್ಥ್ ಸೆಕೆಂಡ್ಗೆ ಸರಾಸರಿ 2,378 ಡಾಲರ್ ಹೆಚ್ಚಾಗಿದೆ. ಅರ್ಥಾತ್, ನಿಮಿಷಕ್ಕೆ 1,42,680 ಡಾಲರ್ನಂತೆ ಗಂಟೆಗೆ 85,60,800 ಡಾಲರ್. ಮಸ್ಕ್ ರಾತ್ರಿ 8 ಗಂಟೆ ನಿದ್ರೆ ಮಾಡುತ್ತಿದ್ದರು ಎಂದಿಟ್ಟುಕೊಂಡರೆ ಅವರು ಬೆಳಗ್ಗೆ ಏಳುವಷ್ಟರಲ್ಲಿ 6,84,86,400 ಡಾಲರ್ನಷ್ಟು ಶ್ರೀಮಂತರಾಗಿದ್ದರು.