

ತೆಲಂಗಾಣ: ಸಾಮಾನ್ಯವಾಗಿ ಲಂಚ (Bribe) ಎಂಬ ಪದ ಕೇಳಿದ ತಕ್ಷಣ ಹಲವರ ಮುಖ ಕೆಂಪಗಾಗುತ್ತದೆ. ಇದಕ್ಕೆ ಕಾರಣ ನಮ್ಮ ಹಣ ಅಲ್ವಾ ಅನ್ನೋ ಮನಸ್ಥಿತಿ. ಸರ್ಕಾರಿ ಕೆಲಸ, ಖಾಸಗಿ ಸಂಸ್ಥೆ, ರಾಜಕೀಯ ವಲಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಈ ಲಂಚಾವತಾರ ಸದಾ ತಾಂಡವವಾಡುತ್ತಿರುತ್ತದೆ. ದಿನದ ಅಂತ್ಯದಲ್ಲಿ ಒಂದಲ್ಲ ಒಂದು ಕಡೆ ಲಂಚದ ವಿಷಯ ಸುದ್ದಿ ಆಗುತ್ತದೆ. ಇಂತಹ ವಿಷಯಗಳು ಸುದ್ದಿಪತ್ರಿಕೆ, ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ನಾವೆಲ್ಲ ನೋಡಿಯೇ ಇದ್ದೇವೆ. ದಿನ ಬೆಳಗಾದರೆ ಈ ಸುದ್ದಿಗಳೇ ಅಗ್ರಸ್ಥಾನದಲ್ಲಿದ್ದರೂ ಅಚ್ಚರಿ ಪಡುವಂತದ್ದೇನಿಲ್ಲ. ಏಕೆಂದರೆ, ಇದೆಲ್ಲವೂ ನಮ್ಮ ದೈನಂದಿನ ಬದುಕಿನಲ್ಲಿ ನೋಡುತ್ತಿರುವ ತೀರ ಸಾಮಾನ್ಯ ಸಂಗತಿ. ಭಗವಂತ ಒಂದೊಳ್ಳೆ ಹುದ್ದೆ, ಉತ್ತಮ ಸಂಬಳ ಕೊಟ್ಟು, ಸ್ಥಾನ-ಮಾನ ನೀಡಿದರೂ ಸಹ ಕೆಲವರ ಹಣದ ದಾಹ ಅಷ್ಟು ಸುಲಭವಾಗಿ ಈಡೇರುವುದಿಲ್ಲ. ಸಂಬಳದ ಜತೆ ಗಿಂಬಳದತ್ತ ಕಣ್ಣಾಯಿಸುವ ಕೆಲವು ಅಧಿಕಾರಿಗಳು, ಮನೆಗೆ ಹೋಗುವಾಗ ತಮ್ಮ ಖಜಾನೆ ತುಂಬಿಸಿಕೊಂಡೇ ಹೋಗ್ತಾರೆ ಎಂಬುದು ನಿಜಕ್ಕೂ ಶೋಚನೀಯ. ಈ ಪೈಕಿ ಅನೇಕರು ಲಂಚ ಸ್ವೀಕರಿಸುವ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ಹಲವಾರು ನಿದರ್ಶನಗಳಿವೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ, ಅಧಿಕಾರಿಯಾದ ತನ್ನ ಪತ್ನಿ ಲಂಚ ಪಡೆಯುವುದನ್ನು ಸಹಿಸಲಾಗದೆ ಆಕೆಯ ಅಸಲಿ ಬಣ್ಣವನ್ನು ಮಾಧ್ಯಮಗಳ ಮುಂದೆ ಬಟಾಬಯಲು ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.
ಇಂತಹ ದೃಶ್ಯಗಳನ್ನು ನಾವೆಲ್ಲ ಸಿನಿಮಾಗಳಲ್ಲಿ ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ, ನಿಜ ಜೀವನದಲ್ಲಿ ನಡೆಯಲು ಸಾಧ್ಯವೇ? ಅದು ಗಂಡ ತನ್ನ ಪ್ರೀತಿಯ ಮಡದಿಯ ಪರ ನಿಲ್ಲದೆ ಹೀಗೆ ಮಾಡುವುದು ನಿಜವೇ? ಎಂಬ ಪ್ರಶ್ನೆಗೆ ಈ ಘಟನೆ ಅದ್ಭುತ ಉದಾಹರಣೆ. ಈಗಾಗಲೇ ಹಲವು ಅಧಿಕಾರಿಗಳು ಲಂಚ ಪಡೆದು ಭ್ರಷ್ಟಾಚಾರ ನಿಗ್ರಹ ಇಲಾಖೆಗೆ ಸಿಕ್ಕಿಬಿದ್ದಿದ್ದಾರೆ. ಇತ್ತೀಚೆಗೆ ಮಹಿಳಾ ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಆ ಆರೋಪ ಮಾಡಿದ್ದು ಬೇರೆ ಯಾರೂ ಅಲ್ಲ. ಆಕೆಯ ಪತಿಯೇ ಎಂಬುದು ಇದೀಗ ಹಲವರ ಅಚ್ಚರಿಗೆ ಕಾರಣವಾಗಿದೆ. ತನ್ನ ಹೆಂಡತಿ ಲಕ್ಷ ಲಕ್ಷ ರೂ. ಹಣವನ್ನು ಲಂಚವನ್ನಾಗಿ ಸ್ವೀಕರಿಸುತ್ತಾಳೆ ಎಂದು ಪೊಲೀಸರಿಗೆ ತಿಳಿಸಿದ್ದಲ್ಲದೇ ವಿಡಿಯೋ ಸಾಕ್ಷಿ ಕೂಡ ಒದಗಿಸಿದ್ದಾರೆ.
ಮನೆಯಲ್ಲಿಟ್ಟಿದ್ದ ಹಣದ ಕಂತೆಗಳನ್ನು ತೋರಿಸಿ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿರುವ ಪತಿ, "ನನ್ನ ಹೆಂಡತಿ ದಿವ್ಯಾ ಜ್ಯೋತಿ ಮಣಿಕೊಂಡ ಪುರಸಭೆ ಡಿಇಇ. ಈ ವಿಡಿಯೋದಲ್ಲಿ ನೀವೇ ನೋಡಿ ಆಕೆ ಲಂಚ ಪಡೆದಿದ್ದಾಳೆ. ಮನೆಯಲ್ಲಿರುವ ಈ ಹಣವೆಲ್ಲಾ ಲಂಚವಾಗಿ ತೆಗೆದುಕೊಂಡಿರುವುದೆ ಎಂದು ದೃಶ್ಯದಲ್ಲಿ ಹೇಳಿದ್ದಾರೆ. ಅಸಲಿಗೆ ಮನೆಯಲ್ಲಿ ಅಂದಾಜು 80 ಲಕ್ಷ ರೂಪಾಯಿ ಇದೆ ಎನ್ನಲಾಗಿದ್ದು, ಲಂಚ ಪಡೆಯದೆ ಪತ್ನಿ ಮನೆಗೆ ಬರುತ್ತಿರಲಿಲ್ಲ" ಎಂದು ಪೊಲೀಸರ ಬಳಿ ಗಂಭೀರ ಆರೋಪ ಮಾಡಿದ್ದಾರೆ.
"ಲಂಚ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಆಗಾಗ್ಗೆ ಆಕೆಗೆ ಹೇಳ್ತಿದ್ದೆ. ಆದರೆ, ನನ್ನ ಯಾವ ಮಾತಿಗೂ ಅವಳು ಕಿಂಚಿತ್ತು ಗೌರವ ಕೊಡುತ್ತಿರಲಿಲ್ಲ. ಲಂಚ ಪಡೆಯದೆ ಆಕೆ ಮನೆಗೆ ವಾಪಾಸ್ ಬರುತ್ತಿರಲಿಲ್ಲ. ನಾನೆಷ್ಟೇ ಹೇಳಿದರೂ ಸಹ ನನ್ನ ಮಾತು ಕೇಳಲಿಲ್ಲ. ಅದಕ್ಕೆ ಈ ವಿಡಿಯೋವನ್ನು ಸಾಕ್ಷಿಯನ್ನಾಗಿ ಮುಂದಿಟ್ಟು, ಆಕೆಯ ಅಕ್ರಮವನ್ನು ಬಯಲಿಗೆಳೆದಿದ್ದೇನೆ" ಎಂದು ಅಧಿಕಾರಿಯ ಪತಿ ವಿಡಿಯೋದಲ್ಲಿ ವಿವರಿಸಿದ್ದಾರೆ,(ಏಜೆನ್ಸೀಸ್).