

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಮಕ್ಕಳ ದಸರಾ ಕಲಾಥಾನ್ ಸಾಂಸ್ಕೃತಿಕ ನಗರಿಯ ಕಲಾ ಶ್ರೀಮಂತಿಕೆ ಸಾಕ್ಷಿಕರಿಸಿತು.
ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ದರು. ವಿವಿಧ ವೇಷಭೂಷಣ ತೊಟ್ಟು ಹೆಜ್ಜೆ ಹಾಕುವ ಮೂಲಕ ನಾಡಿನ ಪರಂಪರೆಯ ಕೊಂಡಿಯನ್ನು ಬೆಸೆದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರಾರಂಭವಾದ ಕಲಾಥಾನ್, ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ ಮಾರ್ಗವಾಗಿ ಸಾಗಿ ಜೂನಿಯರ್ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾಪ್ತಿಗೊಂಡಿತು. ಗೊರವರ ಕುಣಿತ, ಕರಗ, ಗಾರುಡಿ ಗೊಂಬೆ, ವೀರಗಾಸೆ ನೋಡುಗರ ಮನಸೂರೆಗೊಳಿಸಿತು. ಮೈಸೂರು ಅರಸರು, ಬಸವಣ್ಣ, ಅಕ್ಕ ಮಹದೇವಿ, ನವದುರ್ಗೆಯರು ಹೀಗೆ ನಾನಾ ವೇಷ ಧರಿಸಿದ ವಿದ್ಯಾರ್ಥಿಗಳನ್ನು ಬಿರುಬಿಸಿಲಿನಲ್ಲೂ ಹೆಜ್ಜೆಹಾಕಿ ಉತ್ಸವದ ಕಳೆ ಹೆಚ್ಚಿಸಿದರು.
ಚಾಲನೆ: ದಸರಾ ಕಲಾಥಾನ್ ಉತ್ಸವಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿ ಮಾತನಾಡಿ, ಮೈಸೂರಿಗೆ ತನ್ನದೆಯಾದ ಇತಿಹಾಸ, ಪರಂಪರೆ ಇದೆ. ಅದನ್ನು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಉತ್ಸವಗಳನ್ನು ಹಮ್ಮಿಕೋಳ್ಳಲಾಗುತ್ತಿದೆ ಎಂದರು.