ಗರ್ಭಿಣಿ ಪತ್ನಿ ಮೇಲೆ ಸಂದೇಹ; ಎರಡು ಜೀವ ಬಲಿಪಡೆದ ಪತಿಗೆ ಹಿಡಿಶಾಪ!

Untitled design - 2024-02-27T140943.057
Published on

ಸಹರಾನ್‌ಪುರ: ತನ್ನ ಸಹೋದರನೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಪತಿ, ಹೆಂಡತಿ ಹಣ ತರಲು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂಗೆ ತೆರಳಿದಾಗ ಆಕೆಯನ್ನು ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ಹಾಡಹಗಲೇ ನಡೆದಿದೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಪತ್ನಿ ಕೊಂದ ಬಳಿಕ ಮನೆಗೆ ತೆರಳಿ ತನ್ನ ಕಿರಿಯ ಸಹೋದರನ ಮೇಲೂ ಗುಂಡು ಹಾರಿಸಿದ್ದಾನೆ. ಆದರೆ ಅದೃಷ್ಟವಶಾತ್ ಆತನ ತಮ್ಮ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಗುಂಡಿನ ದಾಳಿಯಲ್ಲಿ ಆರೋಪಿಯ ಕಿರಿಯ ಸಹೋದರನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಭೀಕರ ಕೃತ್ಯದಲ್ಲಿ ಪತಿಯಿಂದ ಹತ್ಯೆಯಾದ ಮಹಿಳೆ ಗರ್ಭಿಣಿಯಾಗಿದ್ದು, ಆಕೆಯ ಹೊಟ್ಟೆಯಲ್ಲಿದ್ದ ಮಗು ತನ್ನ ಕಿರಿಯ ಸಹೋದರನಿಗೆ ಸೇರಿದೆ ಎಂದು ಅನುಮಾನಿಸಿದ ಪತಿ, ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.

ರಕ್ತದ ಮಡುವಿನಲ್ಲಿ ಗರ್ಭಿಣಿಯ ಮೃತದೇಹ ಬಿದ್ದಿರುವ ಫೋಟೋ ಪೊಲೀಸರಿಗೆ ಸಿಸಿಟಿವಿ ದೃಶ್ಯದಲ್ಲಿ ಸಿಕ್ಕಿದೆ. ಇಂದು (ಫೆ.27) ಬೆಳಗ್ಗೆ 8.30-9.00 ಗಂಟೆಯ ನಡುವೆ ಈ ಘಟನೆ ಸಂಭವಿಸಿದ್ದು, ಉತ್ತರ ಪ್ರದೇಶದ ಸಹರಾನ್‌ಪುರದ ಮಂಡಿ ಠಾಣಾ ವ್ಯಾಪ್ತಿಯ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂಗೆ ನುಗ್ಗಿ ಪತ್ನಿಯನ್ನು ಗುಂಡಿಟ್ಟು ಹತ್ಯೆಗೈದಿದ್ದಾನೆ. ಮೃತ ಗರ್ಭಿಣಿಯನ್ನು ಆಲಿಯಾ ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಜೀಶಾನ್ ಎಂದು ಹೇಳಲಾಗಿದೆ.

ಹತ್ಯೆಗೆ ಅನುಮಾನವೇ ಕಾರಣ: ತನ್ನ ಕಿರಿಯ ಸಹೋದರನೊಂದಿಗೆ ತನ್ನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ಪತಿ, ಆಕೆಯ ಹೊಟ್ಟೆಯಲ್ಲಿರುವುದು ತಮ್ಮನ ಮಗು ಎಂದು ಅನುಮಾನಿಸಿದ್ದ. ಇದೇ ಗುಂಗಿನಲ್ಲಿದ್ದ ಆರೋಪಿ, ಕೋಪದ ಭರದಲ್ಲಿ ಎಟಿಎಂಯೊಳಗೆ ನುಗ್ಗಿ ಹೆಂಡತಿಯನ್ನು ಗುಂಡಿಕ್ಕಿ ಕೊಂದಿದ್ದಾನೆ.

ಪೊಲೀಸರು ಸ್ಥಳಕ್ಕಾಗಮಿಸಿ, ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಎಫ್ಐಆರ್ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net