

ಬೆಂಗಳೂರು: ಜೆಡಿಎಸ್‌ನವರಿಗೆ ಆತ್ಮವೇ ಇಲ್ಲ ಸಾಕ್ಷಿ ಎಲ್ಲಿಂದ ಬಂತು?. ಸೆಕ್ಯೂಲರ್ ಅಂತ ಹೆಸರಿಟ್ಟುಕೊಂಡು ಯಾರ ಜತೆಗೆ ಸೇರಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಸಂಖ್ಯಾಬಲವಿಲ್ಲದಿದ್ದರೂ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಐದನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರಿಂದ ನಾವು 134 ಜತೆಗೆ ಪಕ್ಷೇತರರಾದ ದರ್ಶನ್ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ ಪುಟ್ಟಸ್ವಾಮಿಗೌಡ ಹಾಗೂ ಜನಾರ್ದನರೆಡ್ಡಿ ಜತೆಗಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬೇರೆ ಪಕ್ಷದವರು ಮತ ಹಾಕಬಹುದು ಎಂದು ನಿಗೂಢವಾಗಿ ಹೇಳಿದರು.
ನಾವು ಯಾರಿಗೂ ಆಸೆ, ಆಮಿಷವೊಡ್ಡಿಲ್ಲ. ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಆಸೆ, ಆಮಿಷ, ಬೆದರಿಕೆ ತಂತ್ರಗಾರಿಕೆಗಳೆಲ್ಲ ಬಿಜೆಪಿ, ಜೆಡಿಎಸ್ ನವರು ಮಾಡುತ್ತಿದ್ದಾರೆಯೇ ಹೊರತು ನಾವಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.