ಪತ್ನಿಯನ್ನು ಕೊಲ್ಲಲು ಕಂಟ್ರಿ ಪಿಸ್ತೂಲ್ ಖರೀದಿಸಿ ಪೊಲೀಸರ ಅತಿಥಿಯಾದ ಪಾಪಿ ಪತಿ!

Cikkodi Young Man (1)
Published on

ಚಿಕ್ಕೋಡಿ: ಹೆಂಡತಿಯನ್ನು ಕೊಲೆ ಮಾಡಲು ಮಹಾರಾಷ್ಟ್ರದಲ್ಲಿ ಕಂಟ್ರಿ ಪಿಸ್ತೂಲ್​ ಖರೀದಿಸಿದ ಚಿಕ್ಕೋಡಿ ಮೂಲದ ಪತಿ ಮಹಾಶಯನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸಚಿನ್ ಬಾಬಾಸಾಹೇಬ್ ರಾಯಮಾನೆ ಬಂಧಿತ ಆರೋಪಿ. ಈತ 15 ದಿನಗಳ ಹಿಂದಷ್ಟೆ ಪತ್ನಿ ಹರ್ಷಿತಾಗೆ ಡಿವೋರ್ಸ್ ನೀಡಿದ್ದ. ಬಳಿಕ ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಹೆಂಡತಿಗೆ ಬೇರೆಯವರ ಜತೆಗೆ ಸಂಬಂಧ ಇದೆ ಎಂದು ಅನುಮಾನಿಸಿ ಕೊಲೆಗೆ ಸ್ಕೆಚ್ ಹಾಕಿದ್ದ. ಅದಕ್ಕಾಗಿ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಕುಪವಾಡ ಗ್ರಾಮದಲ್ಲಿ ಪಿಸ್ತೂಲ್ ಖರೀದಿಸಿದ್ದ.

ಗಾಂಧೀ ಚೌಕ್ ಪೊಲೀಸರಿಂದ ಬಂಧನ

ಪಿಸ್ತೂಲ್ ಖರೀದಿಸಿದ ಬಳಿಕ ಮೀರಜ್​ ರೈಲು ನಿಲ್ದಾಣದಲ್ಲಿ ಆರೋಪಿ ಸಚಿನ್​ ಅನುಮಾನ ಬರುವಂತೆ ಓಡಾಡುತ್ತಿದ್ದ. ಅದನ್ನು ಗಮನಿಸಿದ ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಹೆಂಡತಿಯನ್ನು ಕೊಲ್ಲಲು ರಿವಾಲ್ವರ್​ ಖರೀದಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ತಕ್ಷಣವೇ ಸಚಿನ್​ನನ್ನು ಮೀರಜ್‌ನ ಗಾಂಧೀ ಚೌಕ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಚಿನ್​ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿವಾಸಿ. ಇತ್ತ ಚಿಕ್ಕೋಡಿ ಪೊಲೀಸರಿಗೆ ಸಚಿನ್ ಪತ್ನಿ ಹರ್ಷಿತಾಳಿಂದಲೂ ದೂರು ದಾಖಲಾಗಿದೆ. ತನಗೆ ರಕ್ಷಣೆ ನೀಡುವಂತೆ ಹಾಗೂ ತನ್ನ ಜೀವಕ್ಕೆನಾದರೂ ಆದರೆ ಪತಿ ಸಚಿನ್ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೀರಜ್‌ನ ಗಾಂಧೀ ಚೌಕ್ ಹಾಗೂ ಚಿಕ್ಕೋಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net