

ಬೆಂಗಳೂರು: ಬೆಳ್ಳಂದೂರಿನ ಖಾಸಗಿ ಕಂಪನಿಗೆ ಹುಸಿ ಬಾಂಬ್ ಬೆದರಿಕೆ ಮಾಡಿದ್ದ ಪ್ರಕರಣ ಇದೀಗ ವಿಚಿತ್ರ ತಿರುವು ಪಡೆದಿದೆ.
ಇಬ್ಬರ ನಡುವಿನ ಜಗಳದಿಂದ ಕಂಪನಿ ಮತ್ತು ಪೊಲೀಸರಿಗೆ ಪೀಕಲಾಟ ಉಂಟಾಗಿದ್ದು ಆರೋಪಿ ನವನೀತ್ ಪ್ರಸಾದ್ನನ್ನು ಬಂಧಿಸಲಾಗಿದೆ. ತನಿಖೆ ವೇಳೆ ಆರೋಪಿ ಬಾಂಬ್ ಬೆದರಿಕೆ ಕರೆ ಯಾಕೆ ಹಾಕಿದ್ದು ಎಂದು ಬಾಯ್ಬಿಟ್ಟಿದ್ದು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದೆ.
ಟೀಂ ಲೀಡರ್ ಹಾಗೂ ನವನೀತ್ನ ನಡುವಿನ ಜಗಳವೇ ಬಾಂಬ್ ಬೆದರಿಕೆ ಕರೆಗೆ ಕಾರಣ ಎಂದು ತನಿಖೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಈ ನವನೀತ, ಟೀಂ ಲೀಡರ್ ಮೇಲಿನ ಕೋಪಕ್ಕೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದ. ಈ ಭೂಪ ತನ್ನ ಹೆಸರನ್ನು ಹೇಳಿಕೊಂಡೇ ಕಂಪನಿಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಹಿಂದೆ ನವನೀತ್ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು ಆಗ ಟೀಂ ಲೀಡರ್ ಮತ್ತು ನವನೀತ್ ನಡುವೆ ಆಗಾಗ ಜಗಳ ಆಗುತ್ತಿತ್ತು.
ಈ ಸಂದರ್ಭ, ನವನೀತ್, ತಾನು ಕಂಪನಿಯ ಎಂಡಿಯನ್ನು ಭೇಟಿ ಮಾಡಬೇಕು ಎಂದಿದ್ದ. ಆದರೆ ಭೇಟಿಗೆ ಅವಕಾಶ ಕಲ್ಪಿಸಿರಲಿಲ್ಲ. ಇಷ್ಟಕ್ಕೇ ಸಿಟ್ಟಾಗಿದ್ದ ನವನೀತ್, ನಂತರ ಕೆಲಸ ಬಿಟ್ಟು ಹೋಗಿದ್ದ.
ಆದರೂ, ನಂತರ ಈತ ಟೀಂ ಲೀಡರ್ ಮೇಲಿನ ಕೋಪಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಎನ್ನಲಾಗಿದೆ. ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.