ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ನಿಮ್ಮ ಕೊಡುಗೆ ಅಪಾರ: ಬಿ.ಎಲ್​. ಸಂತೋಷ್​ ಕಾಲೆಳೆದ ಎಂ.ಬಿ. ಪಾಟೀಲ್​

BL Santhosh and MB Patil
Published on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ನಿಮ್ಮ ಕೊಡುಗೆ ಅಪಾರವಾಗಿದೆ. ಅದಕ್ಕಾಗಿ ನಾವು ನಿಮಗೆ ಆಭಾರಿ ಆಗಿರುತ್ತೇವೆ ಎನ್ನುವ ಮೂಲಕ ಬೃಹತ್‌ ಮತ್ತು ಮಧ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್​ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಅವರ ಕಾಲೆಳೆದಿದ್ದಾರೆ.

ಇಂದು ಟ್ವೀಟ್​ ಮಾಡಿರುವ ಎಂ.ಬಿ. ಪಾಟೀಲ್​, ಬಿ.ಎಲ್​. ಸಂತೋಷ್​ರವರೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆಯೂ ಅಪಾರ. ಅದಕ್ಕೆ ನಾವು ನಿಮಗೆ ಆಭಾರಿ. ನೀವು ಬಿಜೆಪಿಯಲ್ಲಿನ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದ್ದೀರಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ.

ಇದೀಗ ಉಳಿದಿರುವ ಏಕೈಕ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಮುಗಿಸಲು ಅವರ ವಿರುದ್ಧ ಬಸವನಗೌಡ ಪಾಟೀಲ್​ ಅವರನ್ನು ಎತ್ತಿ ಕಟ್ಟುವುದರ ಜೊತೆಗೆ ನಿಮ್ಮ ಕಟ್ಟಾ ಶಿಷ್ಯ ಪ್ರತಾಪ್​ ಸಿಂಹ ಅವರ ಹೆಗಲ ಮೇಲೆ ಬಂದೂಕು ಇಟ್ಟು ಗುರಿನೆಟ್ಟಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ.

ಕರ್ನಾಟಕದ ಇತ್ತೀಚಿನ ರಾಜಕಾರಣವನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ವಿಶ್ವೇಶ್ವರ ಭಟ್​ ಅವರು ಹೇಳಿರುವಂತೆ "ಅತಿಯಾದ ‘ಸಂತೋಷ’ವೇ ದುಃಖಕ್ಕೆ ಕಾರಣ" ಎಂದು ವ್ಯಂಗ್ಯವಾಡಿರುವ ಎಂ.ಬಿ. ಪಾಟೀಲ್​, ಲಿಂಗಾಯತರ ನಂತರ ನಿಮ್ಮ ಗುರಿ ಒಕ್ಕಲಿಗರಾ, ದಲಿತರಾ? ಎಂದು ಪ್ರಶ್ನಿಸುವ ಮೂಲಕ ಸಂತೋಷ್​ ಅವರಿಗೆ ಚಾಟಿ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net