

ಹಾಸನ: ಮಹಿಳೆಯೊಬ್ಬರು ಪತಿ ಮಾತ್ರವಲ್ಲದೆ ಆತನ ಅಣ್ಣನ ಮೇಲೂ ಮಚ್ಚಿನ ಹಲ್ಲೆ ಮಾಡಿದ ಪ್ರಸಂಗವೊಂದು ನಡೆದಿದೆ. ಹಾಸನ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಈ ಪ್ರಕರಣ ನಡೆದಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಸವನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಮತಾ ಎಂಬಾಕೆ ಮಚ್ಚಿನಿಂದ ಹಲ್ಲೆ ಮಾಡಿದ ಮಹಿಳೆ. ಈಕೆಯ ಪತಿ ದಿನೇಶ್ ಮತ್ತು ಈತನ ಅಣ್ಣ ಮೋಹನ್ ಹಲ್ಲೆಗೊಳಗಾದವರು.
ಪತಿ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯ ಸೇವಿಸಿ ಬರುತ್ತಿದ್ದ ಕಾರಣಕ್ಕೆ ದಂಪತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಇಂದು ಕೂಡ ಬೆಳಗ್ಗೆಯಿಂದ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಒಂದು ಹಂತದಲ್ಲಿ ಜಗಳ ಅತಿರೇಕಕ್ಕೆ ಹೋಗಿ ಆಕೆ ಮಚ್ಚಿನಿಂದ ಪತಿ ಮತ್ತು ಆತನ ಅಣ್ಣನ ಮೇಲೆ ಹಲ್ಲೆ ಮಾಡಿದ್ದಾಳೆ.
ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿರುವ ಪ್ರಕರಣ ಹೆಚ್ಚಾಗಿದೆ. ಇದರಿಂದ ಪ್ರತಿನಿತ್ಯ ಕುಟುಂಬದಲ್ಲಿ ಜಗಳಗಳು ನಡೆಯುತ್ತಿವೆ. ಹೀಗಾಗಿ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕು ಎಂದು ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದ್ದಾರೆ.